ಚಿತ್ರ ನಿರ್ದೇಶಕ ಫಣಿ ರಾಮಚಂದ್ರ ಕಿರುತೆರೆಗೆ ಬಂದು ಬೀದಿಗೆ ಬಿದ್ದಿದ್ದಾರೆ. ಆಶ್ಚರ್ಯ ಪಡಬೇಡಿ. ಇವರು ಬೀದಿಗೆ ಬೀಳುವಂಥಾದ್ದು ಏನೂ ನಡೆದಿಲ್ಲ ಬಿಡಿ. ಆದರೂ ಬೀದಿಗೆ ಬಿದ್ದದ್ದಂತೂ ಸತ್ಯ.
ಕನ್‌ಫ್ಯೂಸ್ ಆಗಬೇಡಿ. ಇವರು ಸಿದ್ಧಪಡಿಸಿರುವ ಹೊಸ ಧಾರವಾಹಿ ಇದು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಫಣಿ ರಾಮಚಂದ್ರ ಇದೀಗ ಕಿರುತೆರೆಯಲ್ಲೂ ಒಂದಿಷ್ಟು ಹೆಸರು, ಕೀರ್ತಿ ಸಂಪಾದಿಸಲು ಮುಂದಾಗಿದ್ದಾರೆ.
ಅಕ್ಟೋಬರ್ 18ರಿಂದ 'ಬೀದಿಗೆ ಬಿದ್ದವರು' ಹೆಸರಿನ ಹೊಸ ಧಾರವಾಹಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವಿಶಿಷ್ಟ ವಿಡಂಬನೆ, ಹಾಸ್ಯಕ್ಕೆ ಪ್ರಾಧಾನ್ಯ ನೀಡುವ ಮೂಲಕ ಈ ಧಾರವಾಹಿ ಸಿದ್ಧಪಡಿಸಿರುವ ಪಣಿರಾಮಚಂದ್ರ ಈಗಾಗಲೇ ತಮ್ಮ ಗಣೇಶ ಸರಣಿಯ ಚಿತ್ರದ ಮೂಲಕ ಅಪಾರ ಹೆಸರು ಗಳಿಸಿದ್ದಾರೆ. ಇನ್ನಷ್ಟು ಮನೆ ಮಾತಾಗುವ ಉದ್ದೇಶದಿಂದ ಕಿರುತೆರೆಗೆ ಬಂದಿದ್ದಾರೆ.
ಸಾಫ್ಟ್‌ವೇರ್ ಉದ್ಯಮದ ಬದುಕು ಕುರಿತ ವಿಡಂಬನೆ ಈ ಧಾರವಾಹಿಯ ಮೂಲ ಆಸ್ತಿ. ಆರು ಮಂದಿ ಸಾಫ್ಟ್‌ವೇರ್ ಉದ್ಯೋಗಿಗಳ ಜೀವನ ಕುರಿತಾದ ಕಥೆ ಇದರಲ್ಲಿದೆ. ಇವರ ಕುಟುಂಬದ ಸುತ್ತ ನಡೆಯುವ ಘಟನೆಯೇ ಇದರ ಜೀವಾಳ. ಕೌಟುಂಬಿಕ ಕಥೆಗೆ ಹಾಸ್ಯದ ಲೇಪನ ನೀಡಿ ಇದನ್ನು ಸಿದ್ಧಪಡಿಸಲಾಗಿದೆ. ಚಿತ್ರದ ರೀತಿಯೇ ಈಗ ಧಾರವಾಹಿ ಕೂಡಾ ಸಂದೇಶ ನೀಡುವ ಮಾದರಿಯದಾಗಿದೆ. ಇದು ಕೇವಲ ಸಾಫ್ಟ್‌ವೇರ್ ಕುಟುಂಬಕ್ಕೆ ಸೀಮಿತವಾದ ಧಾರವಾಹಿಯಲ್ಲ. ಬದಲಾಗಿ ಇಡೀ ಸಮಾಜಕ್ಕೇ ಒಂದು ಸಂದೇಶ ನೀಡುತ್ತದೆ ಎನ್ನುವುದು ಫಣಿ ಅವರ ವಿವರ.