ರಾಷ್ಟ್ರ ಪ್ರಶಸ್ತಿ ಪುರಸ್ಕೃತರಿಬ್ಬರು ಒಂದಾಗಿದ್ದಾರೆ. ಹೌದು, ನಿರ್ಮಾಪಕರಾದ ಬಸಂತ್ ಕುಮಾರ್ ಪಾಟೀಲ್ ಹಾಗೂ ನಿರ್ದೇಶಕ ಪಿ. ಶೇಷಾದ್ರಿ ಇದೀಗ ಒಂದಾಗಿದ್ದಾರೆ.
ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಪಾಟೀಲರು ಐದು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಶೇಷಾದ್ರಿ ಚಿತ್ರವೊಂದರಲ್ಲಿ ಒಂದಾಗುತ್ತಿದ್ದಾರೆ. ಚಿತ್ರದ ಇನ್ನೊಂದು ವಿಶೇಷ ಅಂದ್ರೆ ಇದು ಕನ್ನಡ ನಾಡಿನ ಅಚ್ಚಳಿಯದ ಹೆಸರಾಗಿರುವ ಡಾ. ಶಿವರಾಮ ಕಾರಂತರದ್ದು. ಶಿವರಾಮ ಕಾರಂತ ಅವರ ಬೆಟ್ಟದ ಜೀವ ಕಾದಂಬರಿಯ ಚಿತ್ರವಿದು. ಶೇಷಾದ್ರಿ ಈ ಚಿತ್ರದ ಹಕ್ಕು ಪಡೆದು ಆಗಲೇ ಬಹಳ ವರ್ಷವಾಗಿ ಬಿಟ್ಟಿದೆಯಂತೆ. ಸರಿಯಾದ ನಿರ್ಮಾಪಕರು, ಸೂಕ್ತ ಪ್ರದರ್ಶನ ವೇದಿಕೆಗಾಗಿ ಕಾಯುತ್ತಿದ್ದರಂತೆ. ಇದೀಗ ಇಬ್ಬರು ದಿಗ್ಗಜರು ಒಟ್ಟಾಗಿ ಮೂರನೇ ದಿಗ್ಗಜರೊಬ್ಬರ ಚಿತ್ರಕ್ಕೆ ನಾಂದಿ ಹಾಡಿದ್ದಾರೆ.
ಇನ್ನು ಇಷ್ಟಕ್ಕೆ ಸುಮ್ಮನಾಗದ ಪಾಟೀಲರು ಇನ್ನೊಂದು ಚಿತ್ರವನ್ನೂ ಕೈಗೆತ್ತಿಕೊಂಡಿದ್ದಾರೆ. ಇದನ್ನು ರಾಮದಾಸ್ ನಾಯ್ಡು ನಿರ್ದೇಶಿಸುತ್ತಿದ್ದಾರೆ. ಹೆಜ್ಜೆಗಳು ಎಂಬ ಹೆಸರನ್ನು ಚಿತ್ರಕ್ಕೆ ಇರಿಸಲಾಗಿದ್ದು, ಇದು ಮಕ್ಕಳ ಚಿತ್ರವಾಗಿದೆ. ಒಟ್ಟಾರೆ ಸದಾ ಹೊಸತನದ ನಿರೀಕ್ಷೆಯಲ್ಲೇ ಇರುವ ಪಾಟೀಲರು ಈ ಮೂಲಕ ಎರಡು ವಿಭಿನ್ನ ಚಿತ್ರವನ್ನು ಕನ್ನಡದ ಜನತೆಗೆ ನೀಡಲು ಮುಂದಾಗಿದ್ದಾರೆ.
ಈ ಮೂಲಕ ಪಾಟೀಲರು ಮಕ್ಕಳ ಚಿತ್ರ ಹಾಗೂ ಒಂದು ಕಲಾತ್ಮಕ ಚಿತ್ರದ ಮೂಲಕ ಜನರ ಮುಂದೆ ಬರಲು ಹೊರಟಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನದಂಥ ಜವಾಬ್ದಾರಿಯುತ ಸ್ಥಾನ ವಹಿಸಿಕೊಂಡು ಚಿತ್ರರಂಗವನ್ನು ನಿರ್ಲಕ್ಷಿಸದ ಇವರು, ಎಲ್ಲಾ ಒತ್ತಡದ ನಡುವೆ ಕಲಾತ್ಮಕ ಚಿತ್ರ ನಿರ್ಮಿಸುವುದನ್ನು ಸಹ ಮುಂದುವರಿಸಿರುವುದು ಶ್ರೇಯಸ್ಕರ.