ಶಿವಣ್ಣ ಅಭಿನಯದ 100ನೇ ಚಿತ್ರ ಜೋಗಯ್ಯದ ಚಿತ್ರೀಕರಣ ಭರ್ಜರಿಯಾಗಿ ಭರದಿಂದ ಸಾಗಿದೆ. ಈಗಾಗಲೇ ಮೈಸೂರಿನಲ್ಲಿ ಶೂಟಿಂಗ್ ಮುಗಿಸಿದ ಚಿತ್ರತಂಡ ಇದೀಗ ಉತ್ತರ ಭಾರತದೆಡೆಗೆ ಪ್ರಯಾಣ ಬೆಳೆಸಿದೆ.
ಮುಂಬೈನಲ್ಲಿ ಕೆಲಕಾಲ ಚಿತ್ರೀಕರಣ ನಡೆಸಿ ಚಿತ್ರ ತಂಡ ಹರಿದ್ವಾರ, ಋಷಿಕೇಷ, ವಾರಣಾಸಿ ಮತ್ತಿತರ ತೀರ್ಥಕ್ಷೇತ್ರಗಳ ಅಸುಪಾಸಿನಲ್ಲಿ ಚಿತ್ರೀಕರಣ ನಡೆಸಲಿದೆ. ಈಗಾಗಲೇ ನಿರ್ದೇಶಕ ಪ್ರೇಮ್ ಸೂಕ್ತ ತಾಣಗಳನ್ನು ಹುಡುಕಿದ್ದು ಈಗಾಗಲೇ ಚಿತ್ರೀಕರಣಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರದ ನಾಯಕಿ ಸುಮಿತ್ ಕೌರ್, ಪೂಜಾ ಗಾಂಧಿ, ಶಿವರಾಜ್ ಕುಮಾರ್ ನಡುವಿನ ಕೆಲವು ದೃಶ್ಯಗಳ ಚಿತ್ರೀಕರಣ ಈಗಾಗಲೇ ಮೈಸೂರಿನಲ್ಲಿ ನಡೆದಿದೆ.
ಈಗಾಗಲೇ ಶಿವಣ್ಣ ಅಘೋರಿಯ ವೇಷದಲ್ಲಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಕ್ಕೂ, ಈಗ ಚಿತ್ರತಂಡ ವಾರಣಾಸಿ, ಹರಿದ್ವಾರದೆಡೆಗೆ ತೆರಳಿದ್ದಕ್ಕೂ ಚಿತ್ರರಸಿಕರು ತಾಳೆ ಮಾಡಿ ನೋಡುತ್ತಿದ್ದಾರೆ. ಹರಿದ್ವಾರ, ವಾರಣಾಸಿಯಲ್ಲಿ ಶಿವಣ್ಣ ಅಘೋರಿಯ ವೇಷಯದಲ್ಲಿ ಶೂಟಿಂಗ್ನಲ್ಲಿ ಭಾಗವಹಿಸುತ್ತಾರಾ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ. ಆದರೆ, ಪ್ರೇಮ್ ಮಾತ್ರ ಇವ್ಯಾವುದಕ್ಕೂ ಉತ್ತರ ಬಿಟ್ಟು ಕೊಟ್ಟಿಲ್ಲ.