ಸ್ವಯಂಕೃಷಿಯಲ್ಲಿ ನಾಯಕ, ನಿರ್ದೇಶಕ, ನಿರ್ಮಾಪಕ ಎಲ್ಲಾ ಒಬ್ಬರೇ!
ನಾಯಕ, ನಿರ್ದೇಶಕ, ನಿರ್ಮಾಪಕ ಮೂರು ಮಹತ್ವದ ಸ್ಥಾನವನ್ನು ನಿಭಾಯಿಸಿ ಗೆದ್ದವರು ಕನ್ನಡ ಚಿತ್ರರಂಗದಲ್ಲಿ ಕಾಣುವುದು ವಿರಳ. ಇವರಲ್ಲಿ ಕೆಲವರು ಕೆಲ ದಿನದ ಅಬ್ಬರದ ನಂತರ ಯಾವುದೋ ಒಂದಕ್ಕೆ ಅಂಟಿಕೊಳ್ಳುವುದು ಸಾಮಾನ್ಯ. ಆದರೆ ಹೊಸ ಸಾಹಸಿಗಳ ಆಗಮನಕ್ಕಂತೂ ಚಿತ್ರರಂಗದಲ್ಲಿ ಕೊರತೆ ಇಲ್ಲ. ಅವರಲ್ಲಿ ಒಬ್ಬರು ಎನ್. ವೀರೇಂದ್ರಬಾಬು.
ಇವರೇ ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸಿದ್ಧಪಡಿಸುತ್ತಿರುವ ಚಿತ್ರ 'ಸ್ವಯಂ ಕೃಷಿ'. ಇವರೊಬ್ಬರೇ ಎಲ್ಲವೂ ಆದ ಮೇಲೆ ಚಿತ್ರದ ಹೆಸರು ಹೀಗಿಟ್ಟಿರುವುದರಲ್ಲಿ ವಿಶೇಷವೇನೂ ಇಲ್ಲ ಅನ್ನುತ್ತಿದ್ದಾರೆ ಗಾಂಧಿನಗರದ ಜನ.
ಇದೊಂದು ತ್ರಿಕೋನ ಪ್ರೇಮ ಕಥೆ. ಆದರೆ ಎಲ್ಲಾ ಚಿತ್ರದ ರೀತಿಯ ಪ್ರೇಮ ಇಲ್ಲಿಲ್ಲ. ಇಲ್ಲಿ ವಿಭಿನ್ನ ಹಾಗೂ ವಿಶಿಷ್ಟವಾದ ಪ್ರೀತಿ ಇದೆ. ಹೇಗೆಂದರೆ ಇಲ್ಲಿನ ತ್ರಿಕೋನ ಪ್ರೇಮಕಥೆಯಲ್ಲಿ ನಾಯಕಿ ಕೇಂದ್ರವಾಗಿದ್ದರೆ ಇವಳನ್ನು ಪ್ರೀತಿಸುವ ಪ್ರೇಮಿ ಒಂದೆಡೆಯಾದರೆ, ಮಗಳೆಂಬ ಅಕ್ಕರೆಯಿಂದ ಪ್ರೀತಿಸುವ ತಂದೆ ಇನ್ನೊಂದೆಡೆ. ಇವರ ಪ್ರೀತಿಯ ತ್ರಿಕೋನ ಪ್ರೇಮ ಕಥೆಯಿದು. ಅದಕ್ಕಾಗಿಯೇ ಇದು ವಿಭಿನ್ನ.
ಇಲ್ಲಿ ಪ್ರೇಮಿ ಪ್ರೇಯಸಿಯನ್ನು ಬಿಟ್ಟುಕೊಡುವುದಿಲ್ಲ. ತಂದೆ ಮಗಳನ್ನು ಬಿಡಲೊಲ್ಲ. ಒಟ್ಟಾರೆ ಇವರ ನಡುವಿನ ಹೊಯ್ದಾಟವೇ ಚಿತ್ರವಾಗಿದೆ. ನೈಜತೆಗೆ ಅತ್ಯಂತ ಹತ್ತಿರವಾಗಿ ಚಿತ್ರ ಸಿದ್ಧಪಡಿಸಲಾಗಿದ್ದು, ಅಂತಿಮವಾಗಿ ಯಾರು ಯಾರ ಪ್ರೀತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ಅನ್ನುವುದನ್ನು ಕಾದು ನೋಡಬೇಕಿದೆ.
ಚಿತ್ರದ ವಿಶೇಷ ಅಂದರೆ, ಇದು ನೋಡಿ ಹೊರ ಬಂದ ಪ್ರೇಕ್ಷಕ ಇಂಥ ಪ್ರೇಮಿ, ಇಂಥ ಮಗಳು ಹಾಗೂ ಇಂಥ ಅಪ್ಪ ಇದ್ದರೆ ಇರಬೇಕು ಅಂತ ಮಾತನಾಡಿಕೊಳ್ಳುತ್ತಾರಂತೆ. ಮಹಾತ್ಮಾ ಗಾಂಧಿ ಸೇರಿದಂತೆ ಹಲವರ ಮಾತುಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಒಂದು ಉತ್ತಮ ಸಂದೇಶ ನೀಡುವ ಚಿತ್ರ ಇದಾಗಿದೆ ಎಂದು ಹೇಳಲಾಗುತ್ತಿದೆ.