ನಂಬಿಕೊಂಡು ಆರಂಭಿಸಿದ ವ್ಯವಹಾರ ನಷ್ಟಕ್ಕೊಳಗಾಗಿ ಸಾಯಲು ನಿರ್ಧರಿಸಿ ಕೊರಳಿಗೆ ಉರುಳು ಬಿಗಿದುಕೊಂಡು ಇನ್ನೇನು ಸಾಯಬೇಕು ಅಂದುಕೊಂಡಾಗ ಒಂದು ಸಿಗರೇಟು ಸೇದೋಣ ಅನ್ನಿಸಿತು. ಕೆಳಗಿಳಿದು ಸಿಗರೇಟು ಹಚ್ಚಿ ಅದು ಬೂದಿಯಾಗುವ ಹೊತ್ತಿಗೆ, ಸಾಯುವ ನಿರ್ಧಾರವೂ ಬೂದಿಯಾಗಿತ್ತು...
ಹೀಗೆ ಸಾಗಿತ್ತು ಆ ವ್ಯಕ್ತಿಯ ಮಾತು. ಅವರೇ ಕಥೆ ಮುಂದುವರಿಸಿ, ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಒಂದು ಸುಂದರ ಭವಿಷ್ಯವಿದೆ ಎನ್ನುವುದನ್ನು ತೋರಿಸಲು ಒಂದು ಚಿತ್ರ ಮಾಡೋಣ ಅಂದುಕೊಂಡೆ. ಸಿದ್ಧತೆ ಆರಂಭಿಸಿದೆ. ಚಿತ್ರ ಸಿದ್ಧವಾಗಿದೆ. ಅಷ್ಟರಲ್ಲಿ ನನ್ನ ಶರೀರದ 20 ಕೆಜಿ ತೂಕ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಪೂರ್ಣ ಖಾಲಿಯಾಗಿದೆ ಎನ್ನುತ್ತಾರೆ.
ಅಂದಹಾಗೆ, ಈ ಚಿತ್ರಕ್ಕಾಗಿ ಇವರು 20 ವರ್ಷ ಶ್ರಮಿಸಿದ್ದಾರೆ. ಚಿತ್ರ ಆರಂಭವಾದ ಮೇಲೂ ಆರ್ಥಿಕ ಸಂಕಷ್ಟ ಸಾಕಷ್ಟು ಎದುರಿಸಿದ್ದಾರೆ. ಅಂತೂ ಹೇಗೋ ಚಿತ್ರ ಮುಗಿಸಿದ್ದಾರೆ. ಮೊನ್ನೆ ಮೊನ್ನೆ ಚಿತ್ರದ ಧ್ವನಿ ಸುರುಳಿಯನ್ನೂ ಜನರ ಕೈಗಿತ್ತಿದ್ದಾರೆ. ಅವರು ಯಾರೆಂದು ಕೊಂಡಿರಾ? ಹೌದು, ಕಡಿಮೆ ಬಜೆಟ್ಟಿನ ಚಿತ್ರ ಸುಸೈಡ್‌ನರೂವಾರಿ ಪ್ರಸಾದ್ ಗುರು ಅವರೇ ಇವರು.
ಹೊಟ್ಟೆ ಪಾಡಿನ ನಡುವೆ ಚಿತ್ರ ಮಾಡುತ್ತಾ ಸಾಗಿದ್ದರಿಂದ ನಿರ್ಮಾಣ ಕೊಂಚ ವಿಳಂಬವಾಗಿದೆ. ಆದರೂ ಉತ್ತಮವಾಗಿದೆ. ಇದನ್ನು ಜನ ಒಪ್ಪುತ್ತಾರೆ. ನನ್ನ ಚಿತ್ರದಿಂದ ಒಂದಿಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಬಿಟ್ಟರೆ ಅಷ್ಟು ಸಾಕು ಎನ್ನುತ್ತಾರೆ ಪ್ರಸಾದ್ ಗುರು.