ಮೊನಾಲಿಸಾ ಚಿತ್ರದ ಮೂಲಕ ಹೆಸರು ಮಾಡಿರುವ ಲಂಕೇಶ ಪತ್ರಿಕೆಯ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇದೀಗ ಹೊಸ ಚಿತ್ರವಾದ ಹುಡುಗ ಹುಡುಗಿಗಾಗಿ ಏನೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರದ ಬಿಡುಗಡೆಗೆ ಮುನ್ನ ನೀಡುವ ಜನಪ್ರಿಯತೆಗೆ ಸಂಪೂರ್ಣ ತೊಡಗಿಕೊಂಡಿದ್ದಾರೆ.
ಲಂಕೇಶ ಪತ್ರಿಕೆ ಸೋಲಿನಿಂದ ಪಾಠ ಕಲಿತಿರುವ ಇವರು ಮುಂದೆ ಮೊನಾಲಿಸಾ ಮಾಡಿದಾಗ ಅನುಸರಿಸಿದ ಮಾರ್ಗಕ್ಕಿಂತ ಉತ್ತಮ ಮಾರ್ಗವನ್ನು ಈಗ ಅನುಸರಿಸುತ್ತಿದ್ದಾರೆ. ಹುಡುಗ ಹುಡುಗಿ ಚಿತ್ರಕ್ಕಾಗಿ ಸಾಕಷ್ಟು ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.
ಕಳೆದ ವಾರ ಚಿತ್ರದ ಹಾಡೊಂದರಲ್ಲಿ ನಟಿಸಿ ಚಿತ್ರಕ್ಕಾಗಿ ಶ್ರಮ ತೋರಿಸಿದ್ದ ಇವರು, ಈ ವಾರ ರ‌್ಯಾಂಪ್ ಮೇಲೆ ಬೆಕ್ಕಿನ ನಡಿಗೆ ನಡೆದಿದ್ದಾರೆ. ಕನ್ನಡ ಚಿತ್ರರಂಗದ ಬಿಂದಾಸ್ ಬಾಲೆಯರನ್ನೂ ರ‌್ಯಾಂಪ್ ಮೇಲೆ ನಡೆಸಿದ್ದಾರೆ. ಈ ಮೂಲಕ ಚಿತ್ರಕ್ಕೆ ಒಂದಿಷ್ಟು ಚಪ್ಪಾಳೆ ಗಿಟ್ಟಿಸಿದ್ದಾರೆ. ಹೌದು, ಸಂದೇಶ್ ನಾಗರಾಜ್ ನಿರ್ಮಾಣದ ಈ ಚಿತ್ರದ ಪ್ರಮೋಷನ್ ಕಾರ್ಯ ಮೈಸೂರು ನಗರದಲ್ಲಿ ಭರದಿಂದ ಸಾಗಿದೆ. ಒಂದೆಡೆ ಶೂಟಿಂಗ್ ಇನ್ನೊಂದೆಡೆ ಪ್ರಮೋಷನ್.
ಚಿತ್ರಕ್ಕಾಗಿ ತಂಡ ಮೈಸೂರಿನಲ್ಲಿ ಒಂದು ಫ್ಯಾಷನ್ ಶೋ ಆಯೋಜಿಸಿತ್ತು. ತುಂಡು ಬಟ್ಟೆಯ ಲಲನೆಯರ ಜತೆ ಚಿತ್ರದ ನಾಯಕ, ನಾಯಕಿ ಜತೆ ನಿರ್ದೇಶಕರೂ ಹೆಜ್ಜೆ ಹಾಕಿದರು. ಇದಕ್ಕೂ ಮುನ್ನ ಇಲ್ಲಿನ ನಾನಾ ಕಾಲೇಜಿಗೆ ತೆರಳಿ ಚಿತ್ರದ ಪ್ರಮೋಶನ್ ಮಾಡಲಾಯಿತು.
ಮೊನಾಲಿಸಾ ಚಿತ್ರದಂತೆಯೇ ಧ್ಯಾನ್ ಹಾಗೂ ಸದಾ ಜೋಡಿಯ ಈ ಚಿತ್ರದಲ್ಲಿ ತೆಲುಗಿನ ಹಾಟ್ ಫೇವರಿಟ್ ಇಲಿಯಾನಾ ಕೂಡಾ ಬಂದು ಕುಣಿದು ಹೋಗಿದ್ದಾರೆ. ನಟಿ ಲೇಖಾ ವಾಷಿಂಗ್ಟನ್ ಕೂಡಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದಕ್ಕಾಗಿ ಇಂದ್ರಜಿತ್ ಲಕ್ಷಗಟ್ಟಲೆ ಸುರಿದಿದ್ದಾರೆ ಕೂಡಾ. ಒಟ್ಟಾರೆ ಸಾಕಷ್ಟು ಗಿಮಿಕ್ ಉಪಯೋಗಿಸಿ ಚಿತ್ರ ಪ್ರಚಾರ ಮಾಡುತ್ತಿದೆ ಹುಡುಗ ಹುಡುಗಿ ತಂಡ.