ಪರಭಾಷೆ ಚಿತ್ರವೊಂದೇ ಕನ್ನಡಕ್ಕೆ ಮಾರಕವಲ್ಲ: ಕ್ರೇಜಿಸ್ಟಾರ್
MOKSHA
'ಜನ ಚಿತ್ರ ಮಂದಿರಕ್ಕೆ ಬರುತ್ತಿಲ್ಲ. ಕನ್ನಡ ಚಿತ್ರದ ಬಗ್ಗೆ ತಾತ್ಸಾರ ತೋರುತ್ತಿದ್ದಾರೆ. ಈ ಸಂದರ್ಭದಲ್ಲಿ ಜನರನ್ನು ಸೆಳೆಯಲು ಹೆಣೆಯುವ ತಂತ್ರ ಎಲ್ಲಿಯದ್ದಾದರೇನು? ಅಲ್ಲಿಂದ ಕದ್ದದ್ದು, ಇಲ್ಲಿಂದ ಎತ್ತಿದ್ದು ಅಂತ ಹೇಳುತ್ತಾ ಕುಳಿತರೆ ಕನ್ನಡಕ್ಕೆ ಉತ್ತಮ ಚಿತ್ರ ಸಿಗಲು ಸಾಧ್ಯವೇ? ಒಳ್ಳೆಯದನ್ನು ಎಲ್ಲಿದ್ದರೂ ಪಡೆಯುವ ವಿಶಾಲ ಹೃದಯ ಇರಬೇಕು!'
ಇದು ನಟ, ನಿರ್ಮಾಪಕ ಹಾಗೂ ನಿರ್ದೇಶಕ ರಾಗಿರುವ ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಖಾರದ ನುಡಿ. ಪೈರಸಿ, ಪರಭಾಷಾ ಚಿತ್ರದಿಂದ ಕನ್ನಡ ಚಿತ್ರರಂಗ ಹಾಳಾಗಿ ಹೋಗಿದೆ ಎಂದು ಅಲವತ್ತುಕೊಳ್ಳುವುದು ಸರಿಯಲ್ಲ. ಪರಭಾಷಾ ಚಿತ್ರ ಬಿಡುಗಡೆ ಆದರೆ ಹೆಚ್ಚೆಂದರೆ ಎರಡು ವಾರ ಕನ್ನಡ ಚಿತ್ರಗಳಿಗೆ ಹೊಡೆತ ನೀಡಬಹುದು. ಅದೂ ಎಂದಿರನ್, ಶಿವಾಜಿ, ಬಾಬಾ ನಂತಹ ಚಿತ್ರಗಳು ಮಾತ್ರ. ಉಳಿದವು ಅವುಗಳ ಪಾಡಿಗೆ ಅವು ಓಡುತ್ತವೆ. ಕನ್ನಡ ಚಿತ್ರಕ್ಕೆ ಇದರಿಂದ ಏನೂ ತೊಂದರೆ ಇಲ್ಲ. ಅದೇ ರೀತಿ ಜನ ಚಿತ್ರ ಚೆನ್ನಾಗಿದ್ದರೆ ಥಿಯೇಟರಿಗೆ ಬಂದು ನೋಡುತ್ತಾರೆ. ಚಿತ್ರವನ್ನು ಚೆನ್ನಾಗಿ ಮಾಡದೇ ಜನ ಬರುವುದಿಲ್ಲ ಎಂದು ಅಲವತ್ತುಕೊಳ್ಳುವವರಿಗೆ ಏನೂ ಹೇಳಲಾಗದು ಎನ್ನುತ್ತಾರೆ.
ಕನ್ನಡ ಚಿತ್ರದ ಸೋಲಿಗೆ ಕಳಪೆ ನಿರ್ಮಾಣ ಹಾಗೂ ಅಸಂಬದ್ಧ ಆಯ್ಕೆ ಕಾರಣ. ಪರಭಾಷಾ ಚಿತ್ರ ಹಾಗೂ ಪೈರಸಿ ಅಲ್ಲ ಎನ್ನುವುದು ರವಿಮಾಮನ ಬಲವಾದ ನುಡಿ. ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ? ಎಂದರೆ, ಇದೆ, ಅದನ್ನು ಎಲ್ಲರೂ ಒಟ್ಟಾಗಿ ಕುಳಿತು ಯೋಚಿಸಿ ಮಾಡಬೇಕು. ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಆಗಬಾರದು. ಎಲ್ಲರಿಗೂ ಸರ್ವ ಸಮ್ಮತ ನಿಲುವು ಕೈಗೊಳ್ಳಬೇಕು ಎನ್ನುತ್ತಾರೆ.
ಅಂದಹಾಗೆ ನಿಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಕೆಲಸ ಎಲ್ಲಿಗೆ ಬಂತು ಅಂದರೆ, ವಿಷಯ ಮೂಲೆಗೇನೂ ಸೇರಿಲ್ಲ. ಅವನಿಗೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ನನ್ನ ಚಿತ್ರಗಳೆಲ್ಲಾ ಮುಗಿದು ನಾನು ನಿವೃತ್ತಿಯಾದ ನಂತರ ನನ್ನಿಂದ ಖಾಲಿ ಆದ ಜಾಗವನ್ನು ಆತ ತುಂಬಬೇಕು. ಹೊಟ್ಟೆ ಬಿಟ್ಟುಕೊಂಡಿರುವ ಅಪ್ಪ, ಸ್ಲಿಂ ಆಗಿರುವ ಮಗ ಇಬ್ಬರೂ ಒಂದೇ ಚಿತ್ರರಂಗದಲ್ಲಿ ಇರಬಾರದು ಅಲ್ಲವಾ? ಅವನು ಅಭಿನಯ ತರಬೇತಿ ಪಡೆಯುತ್ತಿದ್ದಾನೆ ಎಂದರು ತಮಾಷೆಯಾಗಿ.