'ಹಿಂಸೆಯ ದ್ವೇಷಿಸೆಂದ, ಅಹಿಂಸೆಯ ಪ್ರೀತಿಸೆಂದ' ಇದ್ಯಾವುದೋ ದಾರ್ಶನಿಕರು ಆಡಿದ ಮಾತಲ್ಲ. ಬದಲಾಗಿ ಅರವಿಂದ ಸಂದೇಶ. ಹೌದು, ಅರವಿಂದ ಚಿತ್ರದಲ್ಲಿ ಈ ಒಂದು ಸಾಲನ್ನು ಬಳಸಿಕೊಳ್ಳಲಾಗಿದೆ. ಇದೊಂದು ಹೊಸಬರ ಚಿತ್ರವಾಗಿದ್ದು, ನಿರ್ದೇಶಕ ಪಿ.ಪಿ. ಆರ್. ತಿಮ್ಮರಾಜು ಸಾರಥ್ಯದಲ್ಲಿ ಚಿತ್ರ ಸಿದ್ಧವಾಗುತ್ತಿದೆ. ಭಯೋತ್ಪಾದನೆಯ ಸುತ್ತ ಹೆಣೆದಿರುವ ಈ ಚಿತ್ರವನ್ನು ಸಂಪೂರ್ಣ ಹೊಸಬರ ತಂಡ ನಿರ್ವಹಿಸುತ್ತಿರುವುದು ವಿಶೇಷ.
ಇಲ್ಲಿ ಮಚ್ಚು, ಲಾಂಗುಗಳ ಆರ್ಭಟ ಇಲ್ಲ. ರಕ್ತಪಾತವಂತೂ ಇಲ್ಲವೇ ಇಲ್ಲ. ಹಾಗಾದರೆ ಏನಿದೆ ಅಂತ ಕೇಳ್ತೀರಾ? ಪ್ರೀತಿಯ ಸೆಲೆ ಇದೆಯಂತೆ. ಕೇವಲ ಐದು ಫೈಟ್ ಬಿಟ್ಟರೆ ಚಿತ್ರದಲ್ಲಿ ರಾರಾಜಿಸುವುದು ಪ್ರೀತಿ ಮಾತ್ರ. ಆರು ವರ್ಷದ ಪ್ರಯತ್ನದ ಫಲವಾಗಿ ತಿಮ್ಮರಾಜು ನಿರ್ಮಿಸಿರುವ ಚಿತ್ರ ಇದಾಗಿದೆ. ಸಾಕಷ್ಟು ರಿಮೇಕ್ ಚಿತ್ರ ನೋಡಿ ಬೇಸತ್ತಿರುವ ಕನ್ನಡ ಜನರಿಗೆ ಹೊಸದೊಂದು ಅನುಭವ ನೀಡಲು ಈ ಚಿತ್ರ ಸಿದ್ಧಪಡಿಸಿದ್ದೇನೆ. ಕಾಲ ಹಿಡಿದಿದೆ. ಆದರೆ ಉತ್ತಮವಾಗಿದೆ ಎನ್ನುತ್ತಾರೆ ಆಥ್ಮವಿಶ್ವಾಸದಿಂದ.
ತಿಮ್ಮರಾಜು ಚಿತ್ರಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ನಿಜಕ್ಕೂ ಇಂತದ್ದೊಂದು ಚಿತ್ರ ಕನ್ನಡದಲ್ಲಿ ಪ್ರಸ್ತುತ ಅಗತ್ಯವೇನೋ ಅನ್ನಿಸಿತು. ಮರು ಮಾತಾಡದೇ ಹಣ ಹೂಡಿದೆ ಎನ್ನುತ್ತಾರೆ ನಿರ್ಮಾಪಕ ರವಿಕುಮಾರ್. ಯಾರಾದರೂ ಇಷ್ಟಪಟ್ಟರೆ ತೆಲುಗು, ತಮಿಳಿಗೂ ರಿಮೇಕ್ ಹಕ್ಕು ನೀಡುತ್ತೇನೆ ಎಂದು ಸಹ ಇದೇ ಸಂದರ್ಭದಲ್ಲಿ ಅವರು ಘೋಷಿಸಿದ್ದಾರೆ. ಅಂದಹಾಗೆ, ಚಿತ್ರದ ಕಾರ್ಯಕಾರಿ ನಿರ್ಮಾಪಕ ಸಂತೋಷ್ ಕುಮಾರ್ ಕೂಡಾ ಬಣ್ಣ ಹಚ್ಚಿದ್ದಾರಂತೆ. ರಾಜೇಂದ್ರ ಚಿತ್ರದ ನಾಯಕ. ಐಶ್ವರ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುತ್ತಾರೆ ತಿಮ್ಮರಾಜು. ಇವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿ ಎಂದು ಹಾರೈಸೋಣ.