ಅದೊಂದು ಸನ್ನಿವೇಶ. ನಾಯಕ ಹಾಗೂ ನಾಯಕಿ ನೀರಲ್ಲಿ ಮುಳುಗಿಯೇ ಹೋದರು. ಮೇಲೆ ನಿಂತು ನೋಡುತ್ತಿದ್ದ ಇಡೀ ಚಿತ್ರ ತಂಡ ಹೌಹಾರಿತ್ತು. ಏನು ಮಾಡಬೇಕೆಂದು ತೋಚದೇ ಕಂಗಾಲಾಗಿ ಬಿಟ್ಟಿತ್ತು. ಒಂದಿಷ್ಟು ಹೊತ್ತು ಅಲ್ಲಿ ಸಾವು ಬದುಕಿನ ಹೊಯ್ದಾಟವೇ ನಡೆದು ಹೋಯಿತು.
ಆದರೆ ಎಲ್ಲವೂ ಸುಸೂತ್ರವಾಗಿದೆ. ಇದು ಚಲನಚಿತ್ರದ ಸುದ್ದಿಯೇ. ಆದರೆ ನಡೆದದ್ದು ಅಸಲಿ. ಹೌದು, ಇದು ಪ್ರತಿಕ್ಷಣ ಚಿತ್ರದ ಕುರಿತಾದ ಸುದ್ದಿ. ನಾಯಕ ಪ್ರೀತಂ ಹಾಗೂ ನಾಯಕಿ ಸಂಗೀತಾ ಶೆಟ್ಟಿ ನೀರಲ್ಲಿ ನಟಿಸುವ ಸನ್ನಿವೇಶ ಇತ್ತು. ಇದೇ ಸಂದರ್ಭದಲ್ಲಿ ಇವರು ನೀರಲ್ಲಿ ಮುಳುಗುವ ಭೀತಿಯೂ ಒಮ್ಮೆ ಎದುರಾಯಿತು. ಆದರೆ ಅಂತಿಮವಾಗಿ ಎಲ್ಲವೂ ಸರಿಯಾಗಿ ಟೇಕ್ ಆಯಿತು. ಚಿತ್ರದ ಮುಂದಿನ ಭಾಗವೂ ಸುಸೂತ್ರವಾಗಿ ನೆರವೇರಿತು.
ಈ ಸತ್ಯವನ್ನು ಚಿತ್ರದ ನಿರ್ದೇಶಕ ಧನುಷ್ ದ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಹೊರಗೆಡವಿದರು. ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಸನ್ನಿವೇಶ ಸಾಕಷ್ಟು ನಡೆದಿದೆ. ಡಾ. ರಾಜ್ ಕುಮಾರ್ ಅವರ ಚಿತ್ರ ಬದುಕಿನಲ್ಲೂ ಈ ಮಾದರಿಯ ಘಟನೆ ನಡೆದಿತ್ತು. ಗಂಧದ ಗುಡಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಡೆದ ಅವಘಡ ಎಲ್ಲರಿಗೂ ಗೊತ್ತು. ಇತ್ತೀಚೆಗೆ ಡೆಡ್ಲಿ 2 ಚಿತ್ರದಲ್ಲಿ ಎತ್ತರದಿಂದ ನೆಗೆಯುವಾಗ ಬಿದ್ದು ಆದಿತ್ಯ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು ಗೊತ್ತಿದೆ. ಇವೆಲ್ಲ ಕನ್ನಡ ಚಿತ್ರರಂಗದಲ್ಲಿ ಸರ್ವೇ ಸಾಮಾನ್ಯ. ಆದರೆ ಕೆಲವೊಮ್ಮೆ ಚಿತ್ರದ ಚಿತ್ರೀಕರಣಕ್ಕೆ ಇದು ತೊಡಕಾಗುತ್ತದೆ. ಅದೃಷ್ಟಕ್ಕೆ ಪ್ರತಿಕ್ಷಣಕ್ಕೆ ಇದು ಯಾವ ರೀತಿಯ ಸಮಸ್ಯೆಯನ್ನೂ ತಂದಿಡಲಿಲ್ಲ. ಎಲ್ಲವೂ ಸುಸೂತ್ರವಾಗಿ ನೆರವೇರಿದೆ ಎಂದರು. ಚಿತ್ರ ಬಿಡುಗಡೆಯೂ ಶೀಘ್ರವೇ ನೆರವೇರಲಿದ್ದು, ಸಾಕಷ್ಟು ನಿರೀಕ್ಷೆಯನ್ನು ಉಳಿಸಿಕೊಂಡಿದೆ.