ಚಿತ್ರದ ಸ್ಕ್ರಿಪ್ಟು ಟೈಪ್ ಮಾಡಿಸಲು ಹೋದಾಗ ಡಿಟಿಪಿ ಸೆಂಟರ್‌ನಲ್ಲಿದ್ದ ಮಹಿಳೆ ಹೇಳಿದ ಮಾತು, 'ನಿಮ್ಮಂಥವರಿಂದಲೇ ಇಡೀ ಕನ್ನಡ ಚಿತ್ರರಂಗ ಹಾಳಾಗುತ್ತಿದೆ'. ಅದೇ ಟೈಪ್ ಆದ ಕಥೆ ವಾಪಸ್ ಪಡೆಯಲು ಹೋದಾಗ ಅವಳ ಕಣ್ಣಲ್ಲಿ ನೀರಿತ್ತಂತೆ. 'ಇದು ನಿಜಕ್ಕೂ ಉತ್ತಮ ಸಿನಿಮಾ ಕಣ್ರಿ. ಆಲ್ ದಿ ಬೆಸ್ಟ್' ಅಂದಿದ್ದರಂತೆ.
ತೂಫಾನ್ ಚಿತ್ರದ ನಿರ್ದೇಶಕ ಸ್ಮೈಲ್ ಸೀನು ಅವರ ಮಾತಿದು. ಚಿತ್ರದ ಹೆಸರು, ಕಥೆಯ ಆರಂಭ ಹಾಗೂ ಕಥೆ ಕೊಡಲು ಬಂದ ವ್ಯಕ್ತಿಯ ಚರ್ಯೆ ಕಂಡ ಮಹಿಳೆ ಈ ರೀತಿ ಊಹಿಸಿದ್ದು ತಪ್ಪಲ್ಲ. ಆದರೆ ಇದರ ಆಂತರ್ಯ ಗಮನಿಸಿದಾಗ ಆಕೆ ನೀಡಿದ ಪ್ರತಿಕ್ರಿಯೆ ನನಗೆ ಅಚ್ಚರಿ ಮೂಡಿಸಿತು. ನಿಜಕ್ಕೂ ಜನ ಇದನ್ನು ಖಂಡಿತಾ ಒಪ್ಪುತ್ತಾರೆ ಅನ್ನುವ ಸಾಕ್ಷ್ಯ ಸಿಕ್ಕಿದೆ. ಅನ್ನ ಬೆಂದಿರುವುದನ್ನು ನೋಡಲು ಒಂದು ಅಗುಳು ಹಿಸುಕಿದರೂ ಸಾಕು. ಇಡೀ ಪಾತ್ರೆಯಲ್ಲಿರುವ ಎಲ್ಲಾ ಅಗುಳನ್ನೂ ಹಿಸುಕುವ ಅಗತ್ಯ ಇರುವುದಿಲ್ಲ. ಅದೇ ರೀತಿ ನನ್ನ ತೂಫಾನ್ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸುವ ದಿನ ದೂರವಿಲ್ಲ ಎನ್ನುತ್ತಾರೆ.
ತೂಫಾನ್‌ಗೆ ಜಡಿಮಳೆ, ಚಂಡಮಾರುತ ಹಾಗೂ ಬಿರುಗಾಳಿ ಎನ್ನುವ ಮೂರು ಅರ್ಥ ಇದೆ. ಆದರೆ ಇದರಲ್ಲಿ ಯಾವುದು ಬಂದರೂ ಅದಕ್ಕೊಂದು ಕೊನೆ ಇದ್ದೇ ಇದೆ. ಆದರೆ ಪ್ರೀತಿ ಎಂಬ ತೂಫಾನ್ ಬಂದರೆ ಅದರಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟ. ಬದುಕಿ ಆಚೆ ಬರುವುದು ಇನ್ನೂ ಕಷ್ಟ. ಇದನ್ನೇ ಚಿತ್ರದಲ್ಲಿ ತೋರಿಸಲು ಮುಂದಾಗಿದ್ದಾರೆ ಸೀನು.
ಚಿತ್ರದ ಶೀರ್ಷಿಕೆಯಲ್ಲಿಯೇ ಒಂದು ಫೋರ್ಸ್ ಇದೆ. ಟೈಟಲ್ ನೋಡಿದ ತಕ್ಷಣ ಯಾವುದೋ ಆಕ್ಷನ್ ಸಿನಿಮಾ ಅಂದುಕೊಳ್ಳಬಹುದು. ಆದರೆ ಇದು ಪಕ್ಕಾ ಲವ್ ಸ್ಟೋರಿಯಂತೆ. ಇನ್ನೇನು ಎರಡು ತಿಂಗಳಲ್ಲಿ ಚಿತ್ರ ಸಿದ್ಧವಾಗಲಿದೆ. ಈಗ ಏನೇ ಹೇಳಿದ್ರೂ ಚಿತ್ರ ಬಿಡುಗಡೆಯ ನಂತರವಷ್ಟೇ, ಜನರ ಪ್ರೀತಿಯ ತೂಫಾನ್ ಚಿತ್ರಮಂದಿರಕ್ಕೆ ಲಗ್ಗೆ ಹಾಕುತ್ತೋ ಕಾದುನೋಡಬೇಕು.