ಏಕಾಂಗಿ ಚಿತ್ರದ ನಂತರ ಕೊಂಚ ಗ್ಯಾಪ್ ಆಗಿದ್ದು ನಿಜ. ಆದರೆ ನನ್ನ ನಿರ್ದೇಶನ ಸೋತಿಲ್ಲ, ಹಾಗೆಯೇ ಸತ್ತಿಲ್ಲ. ಹೂ ಚಿತ್ರ ಮಾಡಿದೆ ಅದು ಯರ್ರಾಬಿರ್ರಿ ಹಿಟ್ ಆಯಿತು ಎಂದು ತಮ್ಮನ್ನು ತಾವೇ ಸಮರ್ಥಿಸುತ್ತಾರೆ ರವಿಚಂದ್ರನ್.
ಆದರೆ ನೋಡುಗರಿಗೆ ಗೊತ್ತು, ರವಿ ನಿಧಾನವಾಗಿ ಮುಳುಗುತ್ತಿದ್ದಾನೆ. ಏಕಾಂಗಿ ಚಿತ್ರದ ನಂತರ ಯಾವೊಬ್ಬ ನಿರ್ಮಾಪಕ, ನಿರ್ದೇಶಕರೂ ಇವರ ಬಳಿ ಚಿತ್ರ ಮಾಡೋಣ ಅಂತ ಬಂದಿಲ್ಲ. ಎಲ್ಲರೂ ದೂರವೇ ಉಳಿದಿದ್ದಾರೆ. ಇವರನ್ನು ಹಾಕಿಕೊಂಡು ಚಿತ್ರ ಮಾಡಿದರೆ ಕಲೆಕ್ಷನ್ ಆಗೊಲ್ಲ ಅನ್ನುವುದು ಎಲ್ಲರಿಗೂ ಗೊತ್ತಾಗಿದೆ ಅಂತ ಗಾಂಧಿನಗರ ಮಾತಾಡಿಕೊಳ್ಳುತ್ತದೆ.
ಅದೇನೇ ಇರಲಿ, ರವಿಮಾಮನ ಕೂದಲು ಈಗ ಸಾಕಷ್ಟು ಉದುರಿ ಹೋಗಿದೆ. ಟೋಪಿ ಇಲ್ಲದೇ ಫೋಸ್ ನೀಡುವುದೇ ಇಲ್ಲ. ಅಂದಹಾಗೆ ಹೊಟ್ಟೆಯೂ ಸಾಕಷ್ಟು ದೊಡ್ಡದಾಗಿದೆ. ಅಂದಿನ ಹೀರೊ ಲುಕ್ ಉಳಿದಿಲ್ಲ. ಆದರೆ ತಂದೆಯ ಪಾತ್ರ ಮಾಡಲು ಇವರು ಒಪ್ಪುವುದಿಲ್ಲ. ಹಾಗಾಗಿ ನಿರ್ದೇಶಕ, ನಿರ್ಮಾಪಕರು ಇವರಿಂದ ಅಷ್ಟಷ್ಟೇ ದೂರಾಗುತ್ತಿದ್ದಾರೆ ಎಂಬ ಪಿಸುಮಾತುಗಳೂ ಕೂಡಾ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಪ್ರತಿಧ್ವನಿಸುತ್ತಿರುವುದು ಸುಳ್ಳಲ್ಲ.
ಏನೇ ಇರಲಿ ರವಿ ಹಳೆಯ ವೈಭವ ಕಳೆದುಕೊಂಡಿದ್ದಾರೆ. ಉದಯ ರವಿ ಮಧ್ಯಾಹ್ನ ದಾಟಿ ಇಳಿ ಸಂಜೆಯ ಹೊತ್ತಿಗೆ ಬಂದಿದ್ದಾರೆ ಎನ್ನಲು ಏನೂ ಅಡ್ಡಿ ಇಲ್ಲ. ವೈಭವದ ದಿನದಲ್ಲೂ ಇವರು ಸೋಲು ಗೆಲುವು ಎರಡನ್ನೂ ಒಟ್ಟಿಗೇ ಕಂಡವರು. ಈಗಲೂ ಒಂದಲ್ಲಾ ಒಂದು ಸಂದರ್ಭದಲ್ಲಿ ಫೀನಿಕ್ಸಿನಂತೆ ಮೇಲೆದ್ದು ಬರುತ್ತಾರೆ ಅನ್ನುವ ನಿರೀಕ್ಷೆ ಅಭಿಮಾನಿಗಳದ್ದು.
ಮುಂದಿನ ಮೇ 30ಕ್ಕೆ ಇವರಿಗೆ 50 ವರ್ಷ ತುಂಬಲಿದೆ. ಇದೇ ಶುಭ ಸಂದರ್ಭದಲ್ಲಿ ಪುತ್ರ ಮನೋರಂಜನ್‌ನನ್ನು ಚಿತ್ರರಂಗಕ್ಕೆ ಪರಿಚಯಿಸುವ ಕಾರ್ಯವನ್ನೂ ಮಾಡಿ, ಇವರು ತೆರೆಮರೆಗೆ ಸರಿಯುತ್ತಾರೆ ಎನ್ನುವ ಮಾತಿದೆ. ಅದಕ್ಕೆ ಪುಷ್ಟಿ ನೀಡುವಂತೆ, ರವಿಚಂದ್ರನ್ ಕೂಡಾ ಇತ್ತೀಚೆಗೆ, ನನ್ನ ಚಿತ್ರಗಳೆಲ್ಲಾ ಮುಗಿದು ನಾನು ನಿವೃತ್ತಿಯಾದ ನಂತರ ನನ್ನಿಂದ ಖಾಲಿ ಆದ ಜಾಗವನ್ನು ನನ್ನ ಮಗ ತುಂಬಬೇಕು. ಹೊಟ್ಟೆ ಬಿಟ್ಟುಕೊಂಡಿರುವ ಅಪ್ಪ, ಸ್ಲಿಂ ಆಗಿರುವ ಮಗ ಇಬ್ಬರೂ ಒಂದೇ ಚಿತ್ರರಂಗದಲ್ಲಿ ಇರಬಾರದು ಅಲ್ಲವಾ ಎಂದು ತಮಾಷೆಯಾಗಿ ಹೇಳಿದ್ದರು. ಏನೇ ಇರಲಿ, ಒಟ್ಟಾರೆ ಕನ್ನಡ ಚಿತ್ರರಂಗಕ್ಕೊಂದು ಹೊಸ ಅಲೆಯನ್ನು ತಂದುಕೊಟ್ಟ ಕೀರ್ತಿಯಲ್ಲಿ ನಿಸ್ಸಂಶಯವಾಗಿ ರವಿಚಂದ್ರನ್ ಪಾಲು ದೊಡ್ಡದಿದೆ ಎಂಬುದಂತ ನಿಜ.