ಪುನೀತ್, ಕಿಟ್ಟಿ, ಲೂಸ್, ರಾಧಿಕಾ: ನಾಡೋಡಿಗಳ್ ರಿಮೇಕಿಗೆ ಚಾಲನೆ
MOKSHA
ಬಹುತಾರೆಯರ ಸಮಾಗಮದಲ್ಲಿ ನಿರ್ಮಾಣಗೊಂಡ ಚಿತ್ರಗಳ ಸಂಖ್ಯೆ ಕನ್ನಡದಲ್ಲಿ ಅತ್ಯಂತ ಕಡಿಮೆ. ಸ್ಟಾರ್ ನಟರನ್ನು ಒಳಗೊಂಡ ಚಿತ್ರಗಳು ಬಂದಿದ್ದು ಅತ್ಯಂತ ವಿರಳ. ಈಗ ಆ ಕೊರತೆ ನೀಗಲಿದೆ. ಇಲ್ಲಿ ಕನ್ನಡದ ಮೂವರು ಜನಪ್ರಿಯ ನಟರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಂದಹಾಗೆ, ಈ ಚಿತ್ರ ತಮಿಳಿನ ನಾಡೋಡಿಗಳ್ ಚಿತ್ರದ ರಿಮೇಕ್. ಇದರಲ್ಲಿ ಪುನೀತ್, ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ಯೋಗೀಶ್ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಸ್ಟಾರ್ ನಟರ ಸಮಾಗಮದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ನಾಯಕಿಯಾಗಿ ಕನ್ನಡದ ಸದ್ಯದ ಬಹುಬೇಡಿಕೆಯ ನಟಿ ರಾಧಿಕಾ ಪಂಡಿತ್ ಆಯ್ಕೆಯಾಗಿದ್ದು, ಚಿತ್ರದ ಚಿತ್ರೀಕರಣ ಆರಂಭವಾಗಿದೆ.
ಚಿತ್ರ ಮೂವರು ಸ್ನೇಹಿತರ ನಡುವೆ ನಡೆಯುವ ಬಾಂಧವ್ಯವನ್ನು ಪ್ರತಿನಿಧಿಸುತ್ತದೆಯಂತೆ. ನೈಜತೆಗೆ ಅತಿ ಹತ್ತಿರವಾಗಿರುವ ಈ ಚಿತ್ರ ನೋಡುಗರನ್ನು ಅಪಾರವಾಗಿ ಸೆಳೆಯಲಿದೆ ಎನ್ನಲಾಗುತ್ತಿದೆ. ಜನಪ್ರಿಯ ನಿರ್ದೇಶಕ ಗುರುಪ್ರಸಾದ್ ಈ ಚಿತ್ರಕ್ಕೆ ಡೈಲಾಗ್ ಬರೆದಿದ್ದಾರೆ. ಇದರಿಂದ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹೊಂದಿದೆ. ನೇರ ಮಾತು ಹಾಗೂ ಅತ್ಯುತ್ತಮ ವಾಕ್ ಶೈಲಿಯಿಂದ ಚಿತ್ರ ಗೆಲ್ಲಲಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ.
ಚಿತ್ರದಲ್ಲಿ ಪುನೀತ್ ಅವರ ತಂಗಿಯಾಗಿ ತಮಿಳಿನ ನಾಡೋಡಿಗಳ್ ಚಿತ್ರದಲ್ಲಿ ಬಣ್ಣ ಹಚ್ಚಿದ ಅಭಿನಯ ಅವರೇ ಬಣ್ಣಹಚ್ಚುತ್ತಿರುವುದು ವಿಶೇಷ. ನಿಜಜೀವನದಲ್ಲಿ ಮಾತು ಬಾರದ ಅಭಿನಯ ತನ್ನ ನಾಡೋಡಿಗಳ್ ಚಿತ್ರದ ನಟನೆ ಮೂಲಕ ಮನಸೂರೆಗೊಂಡಿದ್ದರು.
ಅಂದಹಾಗೆ ಈ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಯೋಗೀಶ್ ಹಾಗೂ ಕಿಟ್ಟಿ ಅವರಲ್ಲಿ ಅಪಾರ ಅಭಿಮಾನ ಇದೆ. ಇದು ಅವರ ಮಾತಿನಿಂದಲೇ ವ್ಯಕ್ತವಾಗುತ್ತಿದೆ. ನಾವು ಈ ಚಿತ್ರದಲ್ಲಿ ಅದೂ ದೊಡ್ಡ ಹೆಸರಿನ ಬ್ಯಾನರ್ ಅಡಿ ಪಾಲ್ಗೊಳ್ಳುತ್ತಿರುವುದರ ಬಗ್ಗೆ ನಮಗೆ ಹೆಮ್ಮೆ ಇದೆ ಅನ್ನುತ್ತಾರಿವರು.
ಇನ್ನು ನಟಿ ರಾಧಿಕಾ ಅವರನ್ನು ಮಾತನಾಡಿಸಿದಾಗ, ನನ್ನ ಪಾತ್ರ ಈ ಚಿತ್ರದಲ್ಲಿ ವಿಭಿನ್ನವಾಗಿದೆ. ತಿನ್ನುವುದು ಹಾಗೂ ಮಾತನಾಡುವುದು ನನ್ನ ಕೆಲಸ. ಚಿತ್ರದುದ್ದಕ್ಕೂ ಲಂಗ ದಾವಣಿಯಲ್ಲಿಯೇ ಇರುತ್ತೇನೆ ಎನ್ನುತ್ತಾರೆ. ಒಟ್ಟಾರೆ ದೊಡ್ಡ ನಟರ ಮಹಾಪೂರವೇ ಈ ಚಿತ್ರದಲ್ಲಿದ್ದು ಈಗಲೇ ಸಾಕಷ್ಟು ನಿರೀಕ್ಷೆ ಗರಿಗೆದರಿಸಿದೆ.