ಬಾಲಿವುಡ್ ನಟ ವಿವೇಕ್ ಓಬೆರಾಯ್ ಮೊನ್ನೆ ಬೆಂಗಳೂರಿಗೆ ಬಂದಿದ್ದರು. ಈಗ ಮೀಸೆ ಬಿಟ್ಟು ವಿಶಿಷ್ಟ ಗೆಟಪ್ಪಿನಲ್ಲಿರುವ ವಿವೇಕ್ ತನ್ನ ಹೊಸ ಹುರಿಮೀಸೆ ನೀವುತ್ತಾ ಸಂತಸದಿಂದ ಓಡಾಡಿಕೊಂಡಿದ್ದರು.
ರಾಮ್ ಗೋಪಾಲ್ ವರ್ಮರ ರಕ್ತಚರಿತದ ಪ್ರಚಾರಕ್ಕಾಗಿ ಬಂದಿದ್ದ ಓಬೇರಾಯ್ ಇಲ್ಲಿನ ಕೆಲಸಕ್ಕಿಂತ ಇಲ್ಲಿ ಬರುವ ಅವಕಾಶ ಸಿಕ್ಕಿದ್ದಕ್ಕಾಗಿಯೇ ಸಂತಸಪಟ್ಟರು. ಏಕೆಂದರೆ ಇವರು ಅತಿ ಶೀಘ್ರವೇ ರಾಜ್ಯದ ಅಳಿಯ ಆಗುತ್ತಿದ್ದಾರೆ. ಆ ಒಂದು ಸಂತಸವೂ ಇವರಲ್ಲಿತ್ತು. ಮೀಸೆಯಂಚಿನಲ್ಲಿ ತುಂಟ ನಗೆಯೂ ಇಣುಕುತ್ತಿತ್ತು. ಮಾವನ ಮನೆಗೆ ಬಂದ ಅಳಿಯ ಮೀಸೆ ನೀವುತ್ತಾ ಸಂತಸ ಪಟ್ಟಿದ್ದು ನಿಚ್ಚಳವಾಗಿ ಗೋಚರಿಸಿತು.
'ನನಗೆ ಕನ್ನಡ ಚೆನ್ನಾಗಿ ಮಾತನಾಡೋಕೆ ಬರಲ್ಲಾ, ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ' ಎಂದರು. ಆ ನಂತರ ಇಲ್ಲಿನ ಹುಡುಗಿಯನ್ನು ವಿವಾಹವಾಗುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು ಬೆಂಗಳೂರು ಹುಡುಗಿಯರು ತುಂಬಾ ಸುಂದರವಾಗಿರುತ್ತಾರೆ. ಇಷ್ಟು ದಿನ ಕಾದಿದ್ದು ವ್ಯರ್ಥವಾಗಲಿಲ್ಲ. ಒಳ್ಳೆ ಹುಡುಗಿಯ ಕೈ ಹಿಡಿಯುತ್ತಿದ್ದೇನೆ ಎಂದು ಹೇಳಲು ಮರೆಯಲಿಲ್ಲ.
ತನ್ನ ಭಾವಿ ಪತ್ನಿ ಮಾಜಿ ಸಚಿವ ದಿ.ಜೀವರಾಜ್ ಆಳ್ವ ಪುತ್ರಿ ಪ್ರಿಯಂಕಾ ಆಳ್ವಾ ಬಗ್ಗೆ ಮನದುಂಬಿ ಮಾತನಾಡಿದ ಅವರು ನಿಜಕ್ಕೂ ನಾನೊಬ್ಬ ಅದೃಷ್ಟಶಾಲಿ. ಅಲ್ಲದೆ ಆಕೆಯೂ ಕೂಡಾ ಎಂದು ಹಾಸ್ಯ ಚಟಾಕಿ ಹಾರಿಸಿದರು. ಬೆಂಗಳೂರಿಗೆ ಮೊದಲಿನಿಂದಲೂ ಆಗಾಗ ಬರುತ್ತಿದ್ದ ವಿವೇಕ್ ಇನ್ನು ಹೆಚ್ಚು ಬೆಂಗಳೂರಿಗೆ ಬರಲಿದ್ದಾರಂತೆ. ಅತ್ತೆಯ ಮನೆಗೆ ಬರಲೇಬೇಕಲ್ಲಾ ಎಂಬುದು ಒಂದೆಡೆಯಾದರೆ, ಇನ್ನೊಂದು ಇವರಿಗೆ ಬೆಂಗಳೂರೆಂದರೆ ಅಚ್ಚುಮೆಚ್ಚಂತೆ. ಜೊತೆಗೆ, ವಿವೇಕ್ ಅವರನ್ನು ಕನ್ನಡಿಗರು ಕರ್ನಾಟಕದ ಅಳಿಯ ಎಂದು ಗುರುತಿಸುತ್ತಿರುವುದರ ಬಗ್ಗೆ ನನಗಂತೂ ತುಂಬಾ ಖುಷಿಯಾಗಿದೆ ಎಂದರು ವಿವೇಕ್. ಮಾತಿನುದ್ದಕ್ಕೂ ಬೆಂಗಳೂರು ಹಾಗೂ ಇಲ್ಲಿನ ವಾತಾವರಣ, ಆತ್ಮೀಯತೆಯ ಬಗ್ಗೆ ಮೆಚ್ಚುಗೆ ಮಾತನಾಡಿದರು.
ಮದುವೆಯಾದ ತಕ್ಷಣವೇ ಹನಿಮೂನ್‌ಗೆ ಹಾರುವ ಪ್ಲಾನ್ ವಿವೇಕ್‌ಗೆ ಇಲ್ಲವಂತೆ. ರಕ್ತ ಚರಿತ ಬಿಡುಗಡೆ ಕರಿತು ಕೊಂಚ ಪ್ರಚಾರ ಕಾರ್ಯ ಮಾಡಿ, ಬಿಡುಗಡೆಯದ ನಂತರವಷ್ಟೇ ಡಿಸೆಂಬರ್ ತಿಂಗಳ ಸಮಯದಲ್ಲಿ ಹನಿಮೂನ್ ಆಚರಿಸುತ್ತೇವೆ ಎನ್ನುತ್ತಾರೆ ಈ ಒಬೆರಾಯ್. ಈ ಕರ್ನಾಟಕದ ಅಳಿಯನ ದಾಂಪತ್ಯ ಜೀವನಕ್ಕೆ ಮುಂಚಿತವಾಗಿಯೇ ಶುಭ ಹಾರೈಸೋಣ.