ವಾಯುಪುತ್ರದ ನಂತರ ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಚಿತ್ರವೊಂದರಲ್ಲಿ ನಟಿಸಿದ್ದು, ಅವರ ಅಭಿನಯದ ವೀರ ಪರಂಪರೆ ಚಿತ್ರದ ಬಿಡುಗಡೆ ಅತ್ಯಂತ ಸನ್ನಿಹಿತವಾಗಿದೆ. ಇದೇ ಅಕ್ಟೋಬರ್ 29ರಂದು ವೀರ ಪರಂಪರೆ ಬಿಡುಗಡೆ ಕಾಣಲಿದೆ.
ಬಹಳ ವರ್ಷದ ಹಿಂದೆ ಏಕಾಏಕಿ ಒಂದು ಹೊಸ ಟ್ರೆಂಡ್ ಮೂಲಕ ಆಕ್ಷನ್‌ಗೆ ಜೀವ ತುಂಬಿದ್ದ ಅಂಬರೀಷ್ ನಿಧಾನವಾಗಿ ಅದೇ ಜನಪ್ರಿಯತೆ ಆಧರಿಸಿ ರಾಜಕೀಯಕ್ಕೆ ಬಂದಿದ್ದರು. ಮಂಡ್ಯದ ಜನತೆ ಇವರ ಕೈ ಹಿಡಿದು ಸಾಗಿತ್ತು. ಶಾಸಕರಾಗಿ, ಸಂಸದರಾಗಿ ಹಾಗೂ ಕೊನೆಗೆ ಕೇಂದ್ರ ಸಚಿವರೂ ಆಗಿ ಜನಪ್ರಿಯವಾದರು. ಆದರೆ ಅದೇಕೋ ಅದೃಷ್ಟ ಕೈಕೊಟ್ಟಿತು. ರಾಜಕೀಯ ಬದುಕು ಸೋಲಿನತ್ತ ಮುಖ ಮಾಡಿತು. ಇದೀಗ ಹಿಂದಿನ ಬದುಕೇ ಸರಿ ಅಂತ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ.
ಅಂಬರೀಷ್, ಸುದೀಪ್, ಐಂದ್ರಿತಾ ರೇ ನಟನೆಯಲ್ಲಿ ಮೂಡಿ ಬಂದಿರುವ ಹಾಗೂ ಎಸ್. ನಾರಾಯಣ್ ಮಹತ್ವಾಕಾಂಕ್ಷೆಯ ನಿರ್ದೇಶನದ ಚಿತ್ರ ವೀರ ಪರಂಪರೆ. ಒಂದು ಸಮಾಜದಲ್ಲಿ ತಮ್ಮ ಗ್ರಾಮದ ಜನತೆಗೆ ನ್ಯಾಯ, ನೀತಿ, ಧರ್ಮ ಬಳಸಿಕೊಂಡು ಬದುಕುವ ರೀತಿ ನೀತಿ ಹೇಳಿಕೊಡುವುದು, ನ್ಯಾಯವಾಗಿ ಅವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯವನ್ನು ಒದಗಿಸುವ ವಿಭಿನ್ನ ಪಾತ್ರದಲ್ಲಿ ಇವರು ನಟಿಸಿದ್ದಾರೆ. ಇವರಿಗೆ ಬೆನ್ನೆಲುಬಾಗಿ, ಮಗನಾಗಿ ನಟ ಸುದೀಪ್ ಇದ್ದಾರೆ. ವೀರ ಪರಂಪರೆಯನ್ನು ಹೇಗೆ ಮುಂದುವರಿಸಬೇಕು ಎನ್ನುವುದನ್ನು ಈ ಚಿತ್ರ ನೋಡಿ ಕಲಿಯಬಹುದಾಗಿದೆ.
ಚಿಕ್ಕ ಚಿಕ್ಕ ಪಾತ್ರಕ್ಕೂ ಇಲ್ಲಿ ಸಾಕಷ್ಟು ಮಹತ್ವ ನೀಡಲಾಗಿದೆಯಂತೆ. ಒಟ್ಟಾರೆ ಇಡೀ ಚಿತ್ರ ಅಚ್ಚಕಟ್ಟಾಗಿ ಮೂಡಿಬಂದಿದೆ ಎನ್ನುತ್ತಾರೆ ಅಂಬಿ. ಇವರ ನಿರೀಕ್ಷೆಯಂತೆ ಎಲ್ಲವೂ ಸಾಗಲಿ ಎಂದು ಆಶಿಸೋಣ.