ಜನ ಕಿಚ್ಚ ಹುಚ್ಚ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಮನಸಾರೆ ಹಾಡಿ ಹೊಗಳುತ್ತಿದ್ದಾರೆ. ಕೊನೆಗೂ ಕಿಚ್ಚ ಹುಚ್ಚ ತಡವಾಗಿ ಬಂದರೂ ಗೆದ್ದಿದೆ ಅನ್ನುವಲ್ಲಿ ಅನುಮಾನವಿಲ್ಲ. ಹೀಗಂದಿದ್ದು ಇನ್ಯಾರೂ ಅಲ್ಲ, ಸ್ವತಃ ಚಿತ್ರದ ನಿರ್ದೇಶಕ ಗುರುದತ್.
ಚಿತ್ರದ ಬಗ್ಗೆ ನಿರ್ದೇಶಕ ಚಿ.ಗುರುದತ್ ತುಂಬಾ ಖುಶಿಯಾಗಿದ್ದಾರೆ. ನಾನು ಹೇಳುವುದು ಏನೂ ಇಲ್ಲ. ಜನರ ಮುಂದೆ ಎಲ್ಲವನ್ನೂ ಇಟ್ಟಿದ್ದೇನೆ. ಅದನ್ನು ಖುಷಿಯಿಂದ ಸ್ವೀಕರಿಸಿದ್ದಾರೆ. ನನ್ನ ಪ್ರಯತ್ನ ಫಲ ಕೊಟ್ಟಿದೆ. ಇನ್ನೇನು ನಿರೀಕ್ಷಿಸಲು ಸಾಧ್ಯ. ನಿಜಕ್ಕೂ ಒಂದು ಉತ್ತಮ ಚಿತ್ರಕ್ಕೆ ಜನ ಪ್ರೋತ್ಸಾಹ ನೀಡಿದ್ದಾರೆ ಎನ್ನುತ್ತಾರೆ.
ಚಿತ್ರದ ನಿರ್ಮಾಪಕ ಕೆ. ಮಂಜು ಅವರಿಗೆ ಸುದೀಪ್ ಅಭಿನಯ ಮೈ ಜುಂ ಅನ್ನಿಸಿದೆಯಂತೆ. ನಿಜಕ್ಕೂ ಇವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ನಟನೆಗೆ ಇವರು ಕೊಡುವ ಆಸಕ್ತಿ ಹಾಗೂ ನಿಷ್ಠೆ ಈ ಚಿತ್ರವನ್ನೂ ಗೆಲ್ಲಿಸಿದೆ. ಸುದೀಫ್ ಅಭಿನಯ ನಿಜಕ್ಕೂ ಅವಿಸ್ಮರಣೀಯ. ಇವರಿಗೆ ರಮ್ಯಾ ಅತ್ಯುತ್ತಮ ಜೋಡಿ. ಕನ್ನಡ ಚಿತ್ರರಂಗ ಕಂಡ ಅಪರೂಪದ ಜೋಡಿಗಳಲ್ಲಿ ಈ ಜೋಡಿಯೂ ಒಂದು ಎನ್ನುತ್ತಾರೆ ಅವರು.
PR
ಹರಿಕೃಷ್ಣ ಅವರ ಹಾಡು ಇಲ್ಲಿ ಗೆದ್ದಿದೆ. ತುಂಬಾ ಉತ್ತಮ ಹಾಡುಗಳಿಂದ ಇವರು ಮನಸೂರೆಗೊಂಡಿದ್ದಾರೆ. ಒಂದು ಒಳ್ಳೆಯ ಚಿತ್ರಕ್ಕೆ ಏನೆಲ್ಲಾ ಅಂಶಗಳು ಇರಬೇಕೋ ಅದೆಲ್ಲಾ ಇದ್ದುದರಿಂದ ಚಿತ್ರ ಗೆದ್ದಿದೆ. ಈ ಮಾದರಿಯ ಚಿತ್ರದ ನಿರೀಕ್ಷೆಯಲ್ಲಿದ್ದ ಜನರಿಗೆ ಅದು ಸಕಾಲದಲ್ಲಿ ಸಿಕ್ಕಿರುವುದು ವಿಶೇಷ.
ಯಾವುದೇ ಚಿತ್ರ ವೀಕ್ಷಿಸಿದಾಗ ಒಂದಲ್ಲಾ ಒಂದಲ್ಲಾ ಒಂದು ತಪ್ಪು ಕಾಣುತ್ತದೆಯಂತೆ. ಆದರೆ ಈ ಚಿತ್ರ ವೀಕ್ಷಿಸಿದಾಗ ಯಾವುದೇ ಕೊರತೆ ಕಂಡು ಬರಲಿಲ್ಲ. ಪ್ರೇಕ್ಷಕರು ಮೆಚ್ಚಿಕೊಂಡ ರೀತಿ ನಿಜಕ್ಕೂ ಸಂತೋಷ ತಂದಿದೆ ಎನ್ನುತ್ತಾರೆ ನಟ ಸುದೀಪ್. ಒಟ್ಟಾರೆ ಚಿತ್ರದ ಯಶಸ್ಸಿನ ಅಲೆಯಲ್ಲಿ ಇವರೂ ಸೇರಿದಂತೆ ಇಡೀ ತಂಡ ತೇಲಾಡುತ್ತಿದೆ.