.......! ಏನಪ್ಪಾ ಸ್ವಲ್ಪವೂ ಅರ್ಥವಾಗ್ತಿಲ್ಲ ಅಂತ ಅಂದ್ಕೊಂಡ್ರಾ...? ಇದು ತುಳು ಭಾಷೆ. ಇಲ್ಲಿ ತುಳು ಭಾಷೆಯ ಬಳಕೆ ಯಾಕೆ ಅಂದ್ಕೊಂಡ್ರಾ.. ವಿಷಯ ಸಿಂಪಲ್. ನಮ್ಮ ಪೂಜಾ ಗಾಂಧಿ ಈಗ ತುಳು ಚಿತ್ರದಲ್ಲಿ ಅಭಿನಯಿಸಲು ಹೊರಟಿದ್ದಾರೆ. ಕಷ್ಟಪಟ್ಟು ಕನ್ನಡ ಕಲಿತು ಕನ್ನಡಿಗಳೇ ಆಗಿ ಎಲ್ಲರ ಮನಗೆದ್ದಿರುವ ಮುಂಗಾರು ಮಳೆ ಬೆಡಗಿ ನಟಿ ಪೂಜಾಗಾಂಧಿ ಏಕಾಏಕಿ ತುಳು ಭಾಷೆ ಮೇಲೆ ಪ್ರೀತಿ ಬಂದಿದೆಯಂತೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಕನ್ನಡದಲ್ಲಿ ಒಂದಾದ ಮೇಲೊಂದರಂತೆ ನಟಿಸಿದ ಪೂಜಾ ಈಗ ತುಳು ಚಿತ್ರವೊಂದರಲ್ಲೂ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬುದು ಈಗ ಗಾಂಧಿನಗರದ ಸುದ್ದಿ.
ಅಂದಹಾಗೆ, ಸದ್ಯ ಪೂಜಾ ತುಳು ಭಾಷೆಯ 'ಬೀರೆ ದೇವುಪೂಂಜ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಕರಾವಳಿಯ ಐತಿಹಾಸಿಕ ಪ್ರಸಿದ್ಧ ಕಥಾನಕ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಇವರು ನಿರರ್ಗಳವಾಗಿ ಅಲ್ಲದಿದ್ದರೂ, ಕೊಂಚ ತುಳು ಭಾಷೆಯ ಜ್ಞಾನ ಸಂಪಾದಿಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ ಕೊಂಚ ತುಳು ಮಾತಾಡಲು ಶುರು ಮಾಡಿದ್ದಾರೆ ಪೂಜಾ.
ಒಂದು ಭಾಷೆಯ ಚಿತ್ರ ಮಾಡುವ ಮುನ್ನ ಅದನ್ನು ಕಲಿತರೆ ಅಭಿನಯದಲ್ಲೂ ನೈಜತೆ ಪ್ರದರ್ಶಿಸಬಹುದು ಎನ್ನುವುದು ಪೂಜಾರ ನಂಬಿಕೆ. ಅದೇ ನಂಬಿಕೆಯ ಮೇಲೆ ಇವರೀಗ ಕನ್ನಡ ಕಲಿತು ಕನ್ನಡದ ಮನೆ ಮಗಳಾಗಿದ್ದು ಹಳೇ ಸುದ್ದಿ. ಈಗ ತುಳು ನಾಡಲ್ಲೂ ತನ್ನ ಪ್ರೀತಿ ಸಂಪಾದಿಸಲು ಹೊರಟಿದ್ದಾರೆ. ಈ ಚಿತ್ರದಲ್ಲಿ ಕರಾವಳಿಯ ಬಹುಮುಖಗಳು ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಆಳ್ವಾಸ್ ಮುಖ್ಯಸ್ಥ ಮೋಹನ್ ಆಳ್ವ, ಮನೋಹರ್ ಪ್ರಸಾದ್, ಆರ್.ಸಿದ್ದಾರ್ಥ್, ಕದ್ರಿ ನವೀನ್ ಶೆಟ್ಟಿ, ಅರ್ಚನಾ, ರೋಹಿದಾಸ್ ಕದ್ರಿ, ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು, ಎರ್ಮಾಳ್ ಹರೀಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಪ್ರಕಾಶ್ ಪಡುಬಿದ್ರಿ ಸೇರಿದಂತೆ ಹಲವರು ಬಣ್ಣಹಚ್ಚಲಿದ್ದಾರೆ. ಬಹುಮುಖ್ಯವಾಗಿ ಹಿರಿಯ ನಟಿ ಲೀಲಾವತಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಉಮಾಶ್ರೀ ಕೂಡಾ ಈ ಚಿತ್ರದಲ್ಲಿರುವುದು ವಿಶೇಷ.
ಸದ್ಯ ಕನ್ನಡದಲ್ಲಿ ಪೂಜಾ ಗಾಂಧಿ ನಟಿಸಿರುವ ಆಪ್ತ, ತವರಿನ ಋಣ, ನೀ ರಾಣಿ ನಾ ಮಹಾರಾಣಿ ಮುಂತಾದ ಚಿತ್ರಗಳು ತೆರೆಗೆ ಬರಬೇಕಿದೆ. ಈ ನಡುವೆ ಅವರು ತುಳು ಚಿತ್ರವನ್ನೂ ಒಪ್ಪಿಕೊಳ್ಳುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ ನೀತು ಅಭಿನಯದ ರಾಜ್ಯ ಪ್ರಶಸ್ತಿ ವಿಜೇತ ತುಳು ಚಿತ್ರ ಕೋಟಿಚೆನ್ನಯ್ಯ ನಿರ್ದೇಶಿಸಿದ ಆರ್. ಧನರಾಜ್ ಈ ಚಿತ್ರ ನಿರ್ದೇಶಿಸುತ್ತಿರುವುರು ವಿಶೇಷ. ಈ ಚಿತ್ರದಲ್ಲಿ ಪೂಜಾ ಗಂಡನನ್ನು ಅತಿಹೆಚ್ಚು ಪ್ರೀತಿಸುವ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಪೂಜಾಗೆ ಶುಭವಾಗಲಿ.