ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳಿಗೆ ಸಂದ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. ಇತ್ತೀಚೆಗಷ್ಟೇ ಅವರೇ ನಿರ್ಮಿಸಿದ 'ಕನಸೆಂಬ ಕುದುರೆಯೇರಿ' ಚಿತ್ರಕ್ಕೆ 57ನೇ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಮೊನ್ನೆಮೊನ್ನೆಯಷ್ಟೇ ದೆಹಲಿಯಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಆದರೆ ಅವರ ಮುಖದಲ್ಲಿ ಎಂದಿನ ಸಂತೋಷ ಮತ್ತು ತೃಪ್ತ ಭಾವ ಕಾಣುತ್ತಿರಲಿಲ್ಲ. ಬದಲಿಗೆ ದುಃಖದ ಛಾಯೆ ಎದ್ದು ಕಾಣುತ್ತಿತ್ತು. ಕಾರಣ ಈ ಪ್ರಶಸ್ತಿ ಪಡೆಯುವಾಗ ಧರ್ಮಪತ್ನಿ ವೈಶಾಲಿ ಕಾಸರವಳ್ಳಿ ಇಹಲೋಕವನ್ನು ತ್ಯಜಿಸಿರುವುದು.
ಅಂದು ಆಸ್ಪತ್ರೆಯ ಮಂಚದ ಮೇಲೆ ಮಲಗಿದ್ದಾಗ ವೈಶಾಲಿ ಒಂದು ಮಾತು ಹೇಳಿದ್ದನ್ನು ಗಿರೀಶ್ ನೆನೆಪಿಸಿಕೊಂಡಿದ್ದಾರೆ.
'ಪ್ರಶಸ್ತಿ ಸಮಿತಿಯ ತೀರ್ಪುಗಾರರು ಹಾಗೂ ನಿಮ್ಮ ನಡುವಿನ ಸಂಬಂಧ ಚೆನ್ನಾಗಿಲ್ಲ, ಆದ್ದರಿಂದ ನಿಮ್ಮ ಚಿತ್ರಕ್ಕೆ ಈ ಬಾರಿ ರಾಷ್ಟ್ತ್ರೀಯ ಪುರಸ್ಕಾರ ದಕ್ಕಲ್ಲ ಎಂದು ಹೇಳಿದ್ದಳು. ಆಶ್ಚರ್ಯಕರ ರೀತಿಯಲ್ಲಿ ಪ್ರಶಸ್ತಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಮೊದಲು ಸಂತೋಷಪಟ್ಟಿದ್ದು ಆಕೆ' ಎಂದು ಗದ್ಗದಿತರಾಗುತ್ತಾರೆ ಗಿರೀಶ್ ಕಾಸರವಳ್ಳಿ.
ನನ್ನೆಲ್ಲ ಕೆಲಸ ಪುರಸ್ಕಾರ- ಪ್ರಶಸ್ತಿ, ಈ ದಿನ ನಾನು ಏನಾದರೂ ಸಾಧಿಸಿದ್ದೇನೆಂದರೆ ಅವುಗಳಿಗೆ ಆತ್ಮವಾಗಿದ್ದಳು ವೈಶಾಲಿ. ನನ್ನ ಪತ್ನಿ ಇಲ್ಲದೆ ಸ್ವೀಕರಿಸಿದ ಪ್ರಶಸ್ತಿ ನನಗೆ ಏನೂ ಅಲ್ಲ ಎನಿಸುತ್ತದೆ ಎಂದಿದ್ದಾರೆ.