ಕನ್ನಡ ಚಿತ್ರವೊಂದು ತಮಿಳು ಭಾಷೆ ನಡುವೆ ಕಾಲು ಹಾಕುವುದೆಂದರೆ ವಿಶೇಷವೇ ಸರಿ. ಕೆಲ ತಿಂಗಳ ಹಿಂದಷ್ಟೇ 'ಎರಡನೇ ಮದುವೆ' ಚೆನ್ನೈಗೆ ಲಗ್ಗೆ ಹಾಕಿದ ನಂತರ ಇದೀಗ ಪುನೀತ್ ರಾಜ್‌ಕುಮಾರ್ ಅವರ 'ಜಾಕಿ' ಕೂಡ ಅದೇ ದಾರಿ ಹಿಡಿದಿದೆ.
ಜಾಕಿ ಚಿತ್ರದ ಹಾಡುಗಳ ಪ್ರಭಾವ ನೆರೆಯ ನಾಡಿನ ಚಿತ್ರಪ್ರೇಮಿಗಳಿಗೆ ಖುಷಿ ನೀಡಿದೆ. ಅದರಲ್ಲೂ ಚೆನ್ನೈ ಮಹಾನಗರದಲ್ಲಿ ಸೂಪರ್‌ಸ್ಟಾರ್ರಜನಿಕಾಂತ್ ಅವರ 'ಎಂದಿರನ್' ಚಿತ್ರ ಆಕ್ರಮಿಸಿಕೊಂಡಿದ್ದರೂ, ಅದರ ನಡುವೆ ಮಾಯಾಜಾಲ್ ಎನ್ನುವ (ಚೆನ್ನೈ ಹೊರವಲಯ) ಚಿತ್ರಮಂದಿರದಲ್ಲಿ ನಡೆಯುತ್ತಿರುವ 'ಜಾಕಿ' ಹೌಸ್‌ಫುಲ್ ಅಂತೆ.
ಇದು ಪವಾಡವೋ ಅಥವಾ ಮಾತನಾಡುವುದಕ್ಕೆ ಭಾಷೆ ಅಗತ್ಯವಿಲ್ಲ ಎನ್ನುವಂತೆ ಸಹೋದರ ಭಾವನೆಯಿಂದ ಚಿತ್ರ ಭರ್ಜರಿ ಪ್ರದರ್ಶನ ನೀಡುತ್ತಿದೆಯೋ, ಅಂತೂ ಚಿತ್ರ ಓಡುತ್ತಿರುವುದಂತೂ ನಿಜ.
ಇನ್ನು ಚಿತ್ರಕ್ಕೆ ಪ್ರಮುಖ ಆಕರ್ಷಣೆ ಎಂದರೆ ಸಂಗೀತ ಹಾಗೂ ಹಾಡುಗಳು. 'ಎಕ್ಕ ರಾಜಾ ರಾಣಿ', 'ಶಿವ ಅಂತ ಹೋಗುತ್ತಿದ್ದೆ ರೋಡಿನಲಿ' ಸೇರಿದಂತೆ ಇತರ ಹಾಡುಗಳಿಗೆ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಯು ಚಿತ್ರವನ್ನು ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಇತರೆ ದೇಶಗಳಲ್ಲಿ ಬಿಡುಗಡೆ ಮಾಡುವಷ್ಟು ಕೀರ್ತಿ ತಂದಿವೆ ಎನ್ನುತ್ತಾರೆ ರಾಘವೇಂದ್ರ ರಾಜಕುಮಾರ್.