ಈ ಹಿಂದೆ 'ನಾಗಮಂಡಲ'ದಲ್ಲಿ ಜನಮನ ಸೂರೆಗೊಂಡಿದ್ದ ಜನಪ್ರಿಯ ನಟ ಪ್ರಕಾಶ್ ರೈ ಇದೀಗ ಕಂಸನಾಗುತ್ತಿದ್ದಾರೆ. ಹೆಸರಾಂತ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ 'ಕಂಸ' ಚಿತ್ರದಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮನಸ್ಸಿಗೆ ರೈ ಲಗ್ಗೆ ಹಾಕಲಿದ್ದಾರೆ.
ಬಹುಮುಖೀ ನಟನೆಯನ್ನು ಮೈಗೂಡಿಸಿಕೊಂಡಿರುವ ಭಿನ್ನ ನಟ ರೈ ಸ್ವತಃ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ 'ನಾನು ಮತ್ತು ನನ್ನ ಕನಸು' ಸಕ್ಸಸ್ ಗುಂಗಿನಲ್ಲಿರುವಾಗಲೇ ಕನ್ನಡದಲ್ಲಿ ಅವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ.
ಕಂಸ ಹೆಸರೇ ಹೇಳುವಂತೆ ನೆಗೆಟಿವ್ ಕ್ಯಾರೆಕ್ಟರ್, ಅದಕ್ಕೆ ಸೂಕ್ತ ನಟ ಪ್ರಕಾಶ್ ಅವರನ್ನು ಬಿಟ್ಟರೆ ನನ್ನ ದೃಷ್ಟಿಯಲ್ಲಿ ಬೇರೆ ಯಾರೂ ಸುಳಿಯುತ್ತಿಲ್ಲ ಎನ್ನುತ್ತಾರೆ ನಿರ್ದೇಶಕ ಬಾಬು.
ಹಿಂದೆ ನಾಗಾಭರಣ ನಿರ್ದೇಶನದ 'ನಾಗಮಂಡಲ'ವನ್ನು ಸಂಪೂರ್ಣವಾಗಿ ಆವರಿಸಿಕೊಂಡು ಪ್ರೇಕ್ಷಕರನ್ನು ತನ್ಮಯರನ್ನಾಗಿ ಮಾಡಿದ್ದ ಪ್ರಕಾಶ್ ರೈ, ಕಂಸ ಚಿತ್ರದಲ್ಲಿಯೂ ಅದೇ ರೀತಿಯ ಮಾಯೆಯನ್ನು ಮುಂದುವರಿಸುವ ಭರವಸೆಯಲ್ಲಿದ್ದಾರೆ. ಪಾತ್ರಕ್ಕೆ ನ್ಯಾಯ ಸಲ್ಲಿಸುವ ವಿಶ್ವಾಸದಲ್ಲಿದ್ದಾರೆ.
ಹಾಗೆ ನೋಡಿದರೆ ಪ್ರಕಾಶ್ ರೈ ಚಿತ್ರರಂಗ ಪ್ರವೇಶಿಸಿದ್ದು ಕೂಡ ಬಾಬು ಮೂಲಕವೇ. ವಿಷ್ಣುವರ್ದನ್, ಸುಹಾಸಿನಿ ಅಭಿನಯದ 'ಮುತ್ತಿನ ಹಾರ'ದ ಮೂಲಕ ರೈಯವರನ್ನು ಬೆಳ್ಳಿತೆರೆಗೆ ತಂದವರು ಇದೇ ಬಾಬು.
ಆ ನಂತರ ರಾಮಚಾರಿ, ಹರಕೆಯ ಕುರಿ, ನಿಷ್ಕರ್ಷ, ಪ್ರೀತ್ಸೋದ್ ತಪ್ಪಾ, ಏಕಾಂಗಿ, ಅತಿಥಿ, ಪ್ರೀತಿ ಪ್ರೇಮ ಪ್ರಣಯ, ಬಿಂಬ, ಅಜಯ್, ಹೂ ಮುಂತಾದ ಚಿತ್ರಗಳಲ್ಲಿ ಪ್ರಕಾಶ್ ರೈ ನಟಿಸಿದ್ದರು. ಈ ನಡುವೆ ಝೆಡ್ ಮತ್ತು ನಾಗಮಂಡಲ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅವರು ಕಾಣಸಿಕೊಂಡಿದ್ದರು.
ಪ್ರಸಕ್ತ ತೆಲುಗು ಚಿತ್ರರಂಗದಿಂದ ನಿಷೇಧಕ್ಕೊಳಗಾಗಿರುವ ರೈ, ಕನ್ನಡದಲ್ಲಿ ರಾಜಧಾನಿ ಮತ್ತು ಅಕಸ್ಮಾತ್ ಎಂಬ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಅದರ ಬೆನ್ನಿಗೆ ತನ್ನ ನಟನಾ ರೀತಿಗೆ ಪೂರಕವಾಗಿರುವ ಕಂಸನ ಪಾತ್ರವೂ ಸಿಕ್ಕಿದೆ. ಪಾತ್ರವನ್ನು ನುಂಗಲು ಪ್ರಕಾಶ್ ರೈಗೆ ಇನ್ನೇನು ಬೇಕು, ಅಲ್ಲವೇ?