ಇದು ನಿಜಕ್ಕೂ ಜೋಕ್ ಅಲ್ಲ, ಗಂಭೀರ ವಿಚಾರ. ದಕ್ಷಿಣ ಭಾರತದ ಮಣಭಾರದ ಸೆಕ್ಸಿ ನಟಿ ನಮಿತಾರನ್ನು ನಿಜಕ್ಕೂ ಅಭಿಮಾನಿಯೊಬ್ಬ ಅಪಹರಿಸಲು ಯತ್ನಿಸಿದ್ದಾನೆ. ಹಾಗೆ ಮಾಡಲು ಹೋಗಿ ವಿಫಲನಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇದು ನಡೆದಿರುವುದು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿದಿದ್ದ ನಮಿತಾರನ್ನು ಕಾರು ಚಾಲಕನ ಸೋಗಿನಲ್ಲಿ ಬಂದು ಸುಳ್ಳು ಹೇಳಿ ಎಲ್ಲೆಲ್ಲೋ ಕರೆದುಕೊಂಡು ಹೋಗುವ ಯೋಜನೆ ರೂಪಿಸಿದ್ದ ಅಪ್ಪಟ ಅಭಿಮಾನಿಯ ಯತ್ನ ಒಂದು ಹಂತದವರೆಗೆ ಯಶಸ್ವಿಯಾಗಿತ್ತಾದರೂ, ಪೊಲೀಸರು ಬ್ರೇಕ್ ಹಾಕಿ ನಮಿತಾರನ್ನು ರಕ್ಷಿಸಿದ್ದಾರೆ.
ಇದು ನಡೆದಿರುವುದು ಅಕ್ಟೋಬರ್ 25ರ ಸೋಮವಾರ. ಕರೂರ್ ಎಂಬಲ್ಲಿ ಸನ್ಮಾನ ಕಾರ್ಯಕ್ರಮವೊಂದಕ್ಕೆ ತೆರಳಬೇಕಿದ್ದ ನಮಿತಾ ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ಈ ಹೊತ್ತಿನಲ್ಲಿ ಕಾರ್ಯಕ್ರಮದ ಸಂಘಟಕರು ಕಾರು ಕಳುಹಿಸಿದ್ದಾರೆ ಎಂದು ಪೆರಿಯಸಾಮಿ ಎಂಬಾತ ನಮಿತಾರಲ್ಲಿ ಪರಿಚಯಿಸಿಕೊಂಡಿದ್ದ.
ಇದನ್ನು ನಂಬಿದ ನಮಿತಾ ಕಾರಿನಲ್ಲಿ ಕುಳಿತಿದ್ದರು. ಕಾರನ್ನೇರುತ್ತಿದ್ದಂತೆ ಬುರ್ರನೆ ಹೊರಡಿತ್ತು. ವಿಮಾನ ನಿಲ್ದಾಣದಲ್ಲಿ ನಿಜವಾಗಿಯೂ ನಮಿತಾರಿಗಾಗಿ ಕಾಯುತ್ತಿದ್ದ ಕಾರು ಚಾಲಕನಿಗೆ ವಿಚಾರ ತಿಳಿದಾಗ ತಡವಾಗಿತ್ತು. ಆದರೂ ಆತ ತಕ್ಷಣವೇ ಸಂಘಟಕರಿಗೆ ಈ ಬಗ್ಗೆ ಮಾಹಿತಿ ನೀಡಿ, ನಮಿತಾರನ್ನು ಎತ್ತಿಕೊಂಡು ಸಾಗುತ್ತಿದ್ದ ಪೆರಿಯಸಾಮಿ ಕಾರನ್ನು ಹಿಂಬಾಲಿಸತೊಡಗಿದ.
ಈ ಹೊತ್ತಿಗೆ ಪೊಲೀಸರೂ ಜತೆಗೆ ಸೇರಿಕೊಂಡಿದ್ದಾರೆ. ಸುಮಾರು ದೂರ ಸಾಗಿದ ನಂತರ ಪೆರಿಯಸಾಮಿ ಕಾರಿಗೆ ಅಡ್ಡ ಹಾಕಿ ನಮಿತಾರನ್ನು ರಕ್ಷಿಸಿದ್ದಾರೆ.
ತಾನು ನಮಿತಾರ ಅಪ್ಪಟ ಅಭಿಮಾನಿ. ಹಾಗಾಗಿ ಅಪಹರಣಕ್ಕೆ ಯತ್ನಿಸಿದೆ. ಅವರನ್ನು ಏನೂ ಮಾಡುತ್ತಿರಲಿಲ್ಲ. ಕಾರ್ಯಕ್ರಮ ನಡೆಯಬೇಕಿದ್ದ ಜಾಗಕ್ಕೆ ತಲುಪಿಸುವ ಉದ್ದೇಶ ನನ್ನದಾಗಿತ್ತು ಎಂದು ಪೆರಿಯಸಾಮಿ ತಿಳಿಸಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಮಾಜಿ ನಟ ಎಸ್.ಎಸ್. ರಾಜೇಂದ್ರನ್ ಸನ್ಮಾನ ಕಾರ್ಯಕ್ರಮಕ್ಕೆಂದು ಹೊರಟಿದ್ದ ನಮಿತಾ ಜತೆ ಆಕೆಯ ಮ್ಯಾನೇಜರ್ ಜಾನ್ ಎಂಬಾತನಿದ್ದರೂ, ಸಂಘಟಕರು ಕಳುಹಿಸಿದ್ದ ಕಾರು ಇದೇನಾ ಎಂಬುದನ್ನು ಖಚಿತಪಡಿಸಿಕೊಳ್ಳದೆ ಕಾರನ್ನೇರಿದ್ದು ಅಚ್ಚರಿ ಹುಟ್ಟಿಸಿದೆ.