ಕಳೆದ ಎರಡು ವರ್ಷಗಳಿಂದ ಪ್ರಜ್ವಲ್ ದೇವರಾಜ್ ಗ್ರಹಚಾರ ಸರಿಯಿದ್ದಂತಿಲ್ಲ. ಏಕೋ ಏನೋ ಅವರ ಅಭಿನಯದ ಒಂದೂ ಚಿತ್ರ ಹಿಟ್ ಆಗುತ್ತಿಲ್ಲ. ನಿರ್ಮಾಪಕರು ಹಾಕಿದ ಹಣ ಸಹ ವಾಪಸ್ಸಾಗುತ್ತಿಲ್ಲ. ತಂದೆಯಂತೆ ನಟನೆಯಲ್ಲಿ ಎತ್ತಿದ ಕೈ, ಸದೃಢ ದೇಹ ಹಾಗೂ ನೋಡಲು ಸುಂದರವಾಗಿದ್ದರೂ ಲಕ್ ಕೈಕೊಡುತ್ತಿದೆ.
ಇತ್ತೀಚೆಗೆ 'ನನ್ನವನು' ಪ್ರಜ್ವಲ್ ಹಾಗೂ ಐಂದ್ರಿತಾ ರೈ ಜೋಡಿಯಲ್ಲಿ ಬಿಡುಗಡೆಯಾದ ಚಿತ್ರವೂ ಸಹ ಮೂಲೆಗುಂಪಾಗಿ ಹೋಯಿತು. ಆದರೂ 2010ರಲ್ಲಿ ರಾಧಿಕಾ ಪಂಡಿತ್ ಜತೆಗಿನ 'ಸೂಪರ್ ಮ್ಯಾನ್', ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಸರಿಗಮ', 'ಚಂಡ ಭಂಡ', 'ಕಿಡ್ನ್ಯಾಪ್' ಚಿತ್ರಗಳ ನಟನೆಯಲ್ಲಿ ಫುಲ್ ಬಿಜಿಯಾಗಿದ್ದಾರೆ.
ಮುಂದಿನ ವರ್ಷ ಬಿಡುಗಡೆಯಾಗಲಿರುವ 'ಕೋಟೆ', 'ಸುಮ್ ಸುಮ್ನೆ' ಹಾಗೂ 'ಮುರಳಿ ಮೀಟ್ಸ್ ಮೀರಾ' ಚಿತ್ರಗಳ ಚಿತ್ರೀಕರಣದಲ್ಲೂ ತೊಡಗಿಕೊಂಡಿದ್ದಾರೆ.
ಶಶಾಂಕ್ ನಿರ್ದೇಶನದ ಮೊದಲ ಚಿತ್ರ 'ಸಿಕ್ಸರ್' ಹೊರತುಪಡಿಸಿ ಒಂದೇ ಒಂದು ಹಿಟ್ ಚಿತ್ರವನ್ನು ನೀಡಲು ಪ್ರಜ್ವಲ್ಗೆ ಸಾಧ್ಯವಾಗಿಲ್ಲ. ಹತ್ತು ಹಲವು ನಿರ್ದೇಶಕರ ಕೈ ಸೇರಿದರೂ ಉತ್ತಮ ಚಿತ್ರ ನೀಡಲು ಯಾರೊಬ್ಬರಿಗೂ ಆಗಿಲ್ಲ. ಪ್ರಜ್ವಲ್ ಎಡವಿರುವುದು ಇಲ್ಲೇ ಎಂದು ಹೇಳಲಾಗುತ್ತಿದೆ.
ಇನ್ನು 2011 ಪ್ರಜ್ವಲ್ ಪಾಲಿಗೆ ಹೇಗಿರುತ್ತದೆ ಎಂಬುದನ್ನು ಕಾದುನೋಡಬೇಕು.