ಬಾಲಿವುಡ್ ನಟ ಹಾಗೂ 'ರಕ್ತ ಚರಿತ್ರ'ದ ಪರಿಟಾಲ ರವಿ ವಿವೇಕ್ ಓಬೇರಾಯ್‌ನನ್ನು ಮಾಜಿ ಸಚಿವ ದಿ. ಜೀವರಾಜ ಆಳ್ವ ಅವರ ಕುಟುಂಬದ ಅಳಿಯನಾಗಿಸಲು ಪತ್ನಿ ನಂದಿನಿ ಆಳ್ವ ಅದ್ದೂರಿ ಸ್ವಾಗತಕ್ಕೆ ಅಣಿ ಮಾಡಿದ್ದಾರೆ. ಮುಹೂರ್ತ ದಿನವೂ ಬಂದೇ ಬಿಟ್ಟಿದೆ. ಮಂಗಳವಾರವೇ ಬೆಂಗಳೂರಿಗೆ ಆಗಮಿಸಿ ಪ್ರಮುಖ ಹೋಟೆಲ್ ಚಾನ್ಸೆರಿ ಪೆವಿಲಿಯನ್‌ನಲ್ಲಿ ವಿವೇಕ್ ಕುಟುಂಬ ಹಾಗೂ ತೀರ ಹತ್ತಿರ ಸಂಬಂಧಿಕರು ಬೀಡುಬಿಟ್ಟಿದ್ದಾರೆ.
ತಂದೆ ಸುರೇಶ್ ಓಬೇರಾಯ್ ಹಾಗೂ ತಾಯಿ ಯಶೋಧರ ಓಬೇರಾಯ್ ಮಗನ ವಿವಾಹ ವ್ಯವಸ್ಥೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ವರ ಪೂಜೆ ಕಾರ್ಯಕ್ರಮವೂ ಇಲ್ಲೆ ನಡೆದಿದೆ. ಚಾನ್ಸೆರಿ ಪೆವಿಲಿಯನ್‌ನಲ್ಲಿ 40 ಕೊಠಡಿಗಳನ್ನು ಬುಕ್ ಮಾಡಲಾಗಿದೆ.
ವಿವೇಕ್- ಪ್ರಿಯಾಂಕ ವಿವಾಹ ಶುಕ್ರವಾರ ಬೆಳಗ್ಗೆ 8.30ಕ್ಕೆ ಆಳ್ವರ ಫಾರ್ಮ್ ಹೌಸಿನಲ್ಲಿ ನಡೆಯಲಿದೆ. ಮುಹೂರ್ತ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಲವು ಪ್ರಮುಖ ರಾಜಕಾರಣಿಗಳು, ಮೆಘಾಸ್ಟಾರ್ ಚಿರಂಜೀವಿ, ರಾಮ್‌ಚರಣ್, ಅಲ್ಲು ಅರ್ಜುನ್ ಸೇರಿದಂತೆ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.
ಬಾಲಿವುಡ್ ಸಹನಟಿಯರಾದ ಸುಷ್ಮಿತಾ ಸೇನ್ ಹಾಗೂ ದಿಯಾ ಮಿರ್ಜಾ ಕೂಡ ವಿವಾಹಕ್ಕೆ ಆಗಮಿಸಲಿದ್ದಾರೆ. ಗುರುವಾರ ರಾತ್ರಿ ಖ್ಯಾತ ಡ್ರಮ್ಸ್ ಮಾಸ್ಟರ್ ಶಿವಮಣಿಯವರ ಸಂಗೀತ ಕಾರ್ಯಕ್ರಮ, ಭಾಂಗ್ರ ಸೇರಿದಂತೆ ಪಂಜಾಬಿ- ಸಿಂಧಿ ಶೈಲಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಿಯಾಂಕ ಸಹೋದರ ಆದಿತ್ಯ ಆಳ್ವ ತಿಳಿಸಿದ್ದಾರೆ.
ವಿವಾಹ ಕಾರ್ಯಕ್ರಮದ ಹೊಣೆಗಾರಿಕೆ, ವಧು-ವರನ ಅಲಂಕಾರ ಮುಂತಾದವನ್ನು ಖ್ಯಾತ ಡಿಸೈನರ್ ತರುಣ್ ತಹಿಲಿಯಾನಿ ವಹಿಸಿಕೊಂಡಿದ್ದಾರೆ. ಬುಧವಾರ ಬೆಳಗ್ಗೆ ನಡೆದ ಕಂಕಣ ಕಟ್ಟುವ ಕಾರ್ಯಕ್ರಮದಲ್ಲಿ ಆಳ್ವ ಮನೆಯಲ್ಲಿ ಓಬೇರಾಯ್ ಕುಟುಂಬ ಸೇರಿದಂತೆ ಸುಮಾರು 300 ಮಂದಿ ಪಾಲ್ಗೊಂಡಿದ್ದರು.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ಶಹನಾಯ್ ವಾದನ, 12 ಗಂಟೆಗೆ ಅರಶಿನ, 4 ಗಂಟೆಗೆ ಶೆರಾ ಬಂಧಿ, 5.30ಕ್ಕೆ ಬಾರಾತ್, 7ಗಂಟೆಗೆ ಮಿಲಿನಿ ಹಾಗೂ ಜಯಮಾಲ (ಹಾರ ತೊಡಿಸುವ) ಕಾರ್ಯಕ್ರಮವಿರುತ್ತದೆ. ಹೆಸರಾಂತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಕೊಳಲು, ಕಣ್ಣನ್ ಅವರ ವೀಣಾವಾದನ ಹಾಗೂ ಶಹನಾಯ್ ಸಂಗೀತ ಕಾರ್ಯಕ್ರಮ ಸಹ ಏರ್ಪಡಿಸಲಾಗಿದೆ.