ಕಳೆದ ಹಲವು ವರ್ಷಗಳಿಂದ ಐಶ್ವರ್ಯಾ ರೈ ಸೇರಿದಂತೆ ಹಲವರ ಜತೆ ಸುತ್ತಾಡುತ್ತಾ ಸಾಕಷ್ಟು ಗಾಸಿಪ್‌ಗಳನ್ನು ಎದುರಿಸಿದ್ದ ಬಾಲಿವುಡ್ ನಟ ವಿವೇಕ್ ಒಬೆರಾಯ್ ತನ್ನ ಬ್ಯಾಚುಲರ್ ಪದವಿಗೆ ರಾಜೀನಾಮೆ ನೀಡಿದ್ದಾರೆ!
ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ದಿವಂಗತ ಜೀವರಾಜ್ ಆಳ್ವ - ನಂದಿನಿ ಆಳ್ವ ದಂಪತಿ ಪುತ್ರಿ ಪ್ರಿಯಾಂಕಾ ಆಳ್ವ ಅವರನ್ನು ವರಿಸುವ ಮೂಲಕ ಅವರು ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ.
ಆಳ್ವಾ ಫಾರ್ಮ್ ಹೌಸಿನಲ್ಲಿ ನಡೆದ ಈ ಮದುವೆಗೆ ಆಹ್ವಾನಿತ ಗಣ್ಯರಿಗಷ್ಟೇ ಪ್ರವೇಶವಿತ್ತು. ಬೆಳಿಗ್ಗೆ 11 ಗಂಟೆಗೆ ಮಂಗಳೂರು - ಪಂಜಾಬ್ ಶೈಲಿಯಲ್ಲಿ ವಿವೇಕ್-ಪ್ರಿಯಾಂಕಾ ಸಪ್ತಪದಿ ತುಳಿದರು.
ಸಂಯುಕ್ತ ಜನತಾದಳ ನಾಯಕರಾಗಿದ್ದ ಜೀವರಾಜ್ ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಸಚಿವರಾಗಿದ್ದರು. ಅವರು 2001ರಲ್ಲಿ ತೀರಿಕೊಂಡಿದ್ದರು. ಜೀವರಾಜ್ ಪತ್ನಿ ನಂದಿನಿ ನಾಟ್ಯ ಚತುರೆ. ಇದೀಗ ವಿವೇಕ್ ಪತ್ನಿಯಾಗಿರುವ 28ರ ಹರೆಯದ ಪ್ರಿಯಾಂಕಾ ಬ್ರಿಟನ್‌ನಲ್ಲಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವೀಧರೆ.
ಗುರುವಾರವೇ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿದ್ದವು. ಇದು ಶುಕ್ರವಾರ ತಡರಾತ್ರಿ ಸುಮಾರು ಒಂದು ಗಂಟೆಯವರೆಗೂ ನಡೆದಿದೆ.
ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸೇರಿದಂತೆ ಹಲವು ರಾಜಕಾರಣಿಗಳು, ರಜನಿಕಾಂತ್, ಚಿರಂಜೀವಿ, ಸೈಫ್ ಆಲಿ ಖಾನ್, ಕರೀನಾ ಕಪೂರ್, ಅಕ್ಷಯ್ ಕುಮಾರ್, ಸುಷ್ಮಿತಾ ಸೇನ್, ಮಣಿರತ್ನಂ, ಅಂಬರೀಷ್, ಸುಮಲತಾ, ಪ್ರಕಾಶ್ ರೈ ದಂಪತಿ, ಸುದೀಪ್ ಮುಂತಾದ ಚಿತ್ರತಾರೆಗಳು ಮತ್ತು ಗಣ್ಯರು ಸಮಾರಂಭಕ್ಕೆ ಹಾಜರಾಗಿದ್ದಾರೆ. ಸುಮಾರು ಒಂದು ಸಾವಿರದಷ್ಟು ಗಣ್ಯರು ವಿವೇಕ್ ಮದುವೆಗೆ ಸಾಕ್ಷಿಯಾದರು.
ಮಾಜಿಗಳು ಮದುವೆಗೆ ಬರಲಿಲ್ಲ... ವಿವೇಕ್ ಒಬೆರಾಯ್ ತನ್ನ ಚಿತ್ರಗಳಿಗಿಂತ ಹೆಚ್ಚು ಪ್ರಣಯಗಳಿಂದಲೇ ಸುದ್ದಿಯಾದವರು. ಬಾಲಿವುಡ್ ಬ್ಯಾಡ್‌ಬಾಯ್ ಸಲ್ಮಾನ್ ಖಾನ್‌ರಿಂದ ಕಳಚಿಕೊಂಡಿದ್ದ ಕರಾವಳಿ ಬಂಟರ ಹುಡುಗಿ ಐಶ್ವರ್ಯಾ ರೈ ಕೆಲ ಕಾಲ ವಿವೇಕ್ ತೆಕ್ಕೆಯಲ್ಲಿದ್ದರು. ಆದರೆ ಅದು ಕೆಲವೇ ತಿಂಗಳಲ್ಲಿ ಮುರಿದು ಬಿದ್ದಿತ್ತು.
ಈ ವಿಚಾರದಲ್ಲಿ ತುಸು ಆತುರ ಪ್ರದರ್ಶಿಸಿದ್ದ ವಿವೇಕ್, ತಾವಿಬ್ಬರೂ ಪ್ರೇಮಿಗಳು; ವಿವಾಹವಾಗಲಿದ್ದೇವೆ ಎಂದು ಹೇಳುವ ಮೂಲಕ ಐಶ್ವರ್ಯಾ ರೈಗೆ ಇರುಸು ಮುರುಸು ಉಂಟು ಮಾಡಿದ್ದರು. ತದ ನಂತರ ಈ ಜೋಡಿ ಬೇರ್ಪಟ್ಟಿತ್ತು.
ಆದರೂ ವಿವೇಕ್ ಸ್ವತಃ ಐಶ್ವರ್ಯಾ ಮನೆಗೆ ಹೋಗಿ ಮದುವೆ ಆಹ್ವಾನ ಪತ್ರಿಕೆ ನೀಡಿ ಬಂದಿದ್ದರು. ಆದರೆ ಐಶ್ವರ್ಯಾ ರೈ, ಗುರುಪ್ರೀತ್ ಗಿಲ್, ಸೇರಿದಂತೆ ವಿವೇಕ್‌ರ ಇತರ ಮಾಜಿ ಗರ್ಲ್‌ಫ್ರೆಂಡ್‌ಗಳ್ಯಾರೂ ಮದುವೆಗೆ ಬಂದಿಲ್ಲ ಎಂದು ಮೂಲಗಳು ಹೇಳಿವೆ.