ಮುದ್ದು ಮುಖದ ಅಮೂಲ್ಯಳನ್ನು ಮೆಚ್ಚಿಕೊಳ್ಳದವರು ಯಾರು? ಅದರಲ್ಲೂ ಹದಿಹರೆಯದ ಹುಡುಗರಂತೂ ಈಗಷ್ಟೇ ಹೈಸ್ಕೂಲು ಮುಗಿಸಿರುವ ಹುಡುಗಿಯನ್ನು ಪರಿಪರಿಯಾಗಿ ಕಾಡುತ್ತಾರೆ. ಅಂತಹ ಅಭಿಮಾನಿಗಳಿಂದ ಸಾಕಷ್ಟು ಕಿರಿಕಿರಿಯನ್ನೂ ಐಸೂ ಅನುಭವಿಸಿಯಾಗಿದೆ. ಆದರೂ ಅಭಿಮಾನಿಗಳು ಕಾಡಿಸುವುದು ಆಕೆಗೆ ಇಷ್ಟವಾದಂತಿದೆ.
ಈ ರೀತಿಯಾಗಿ ಅಮೂಲ್ಯ ಅಭಿಮಾನಿಗಳಿಂದ ಪುಳಕಗೊಂಡಿರುವುದು ಮೈಸೂರಿನಲ್ಲಿ. ಅರಮನೆ ನಗರಿಯ ದೇವರಾಜ ಅರಸು ರಸ್ತೆಯ ಚಾಮುಂಡಿ ಗೆಸ್ಟ್ ಹೌಸ್ ಬಳಿಯಲ್ಲಿ 'ಚೆಲುವಿನ ಚಿತ್ತಾರ'ದ ಐಸೂ ಹೊಸ ಚಿತ್ರ 'ಮನಸಾಲಜಿ' ಶೂಟಿಂಗ್ ನಡೆಯುತ್ತಿದ್ದು. ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟಿಯ ದರ್ಶನಕ್ಕಾಗಿ ಮೈಸೂರಿನ ಪಡ್ಡೆ ಹುಡುಗರು ರಾಶಿ ಬಿದ್ದಿದ್ದರು. ಜತೆಗೆ 50 ದಾಟಿದವರು ಕೂಡ ಇಣುಕುತ್ತಿದ್ದುದು ವಿಶೇಷವಾಗಿತ್ತು.
ಅಮೂಲ್ಯ ಶೂಟಿಂಗ್‌ನಲ್ಲಿ ನಿರತಳಾಗಿದ್ದರೂ, ಅಭಿಮಾನಿಗಳು ಸುತ್ತುವರಿದು ಐಸೂ... ಐಸೂ... ಐ ಲವ್ ಯೂ ಎಂದು ಕೂಗಿಕೊಳ್ಳುತ್ತಿದ್ದರು. ಇದರಿಂದ ಅಮೂಲ್ಯ ಪುಳಕಿತಳಾದಂತೆ ಕಂಡಿದನ್ನು ನಿರ್ದೇಶಕ ದೀಪಕ್ ಅರಸ್ ಗಮನಿಸುತ್ತಿದ್ದರು. ಇದೇ ರೀತಿ 'ಪ್ರೇಮಿಸಂ' ಚಿತ್ರದ ಚಿತ್ರೀಕರಣದಲ್ಲೂ ಪಡ್ಡೆ ಹುಡುಗರು ಸೇರಿದ್ದನ್ನು ನೆನಪಿಸಿಕೊಂಡ ದೀಪಕ್ ಮಂದಹಾಸ ಬೀರಿದರು.
ಇಷ್ಟಾದರೂ ಅಮೂಲ್ಯ ಅಭಿಮಾನಿಗಳತ್ತ ಹೆಚ್ಚಿನ ಗಮನ ಕೊಡದೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡರು. ಬಹುಶಃ ಈ ಹಿಂದಿನ ಅಭಿಮಾನಿಯೊಬ್ಬನ ರಗಳೆಯನ್ನು ನೆನಪಿಸಿಕೊಂಡಿರಬಹುದು.
ಇತ್ತೀಚೆಗೆ ಕನ್ನಡ ಚಿತ್ರಗಳು ಮೈಸೂರು ಆಸುಪಾಸಿನಲ್ಲಿ ಚಿತ್ರೀಕರಣ ನಡೆಸಲು ಮತ್ತೆ ಒಲವು ತೋರಿಸುತ್ತಿವೆ. ಕೆಲ ವರ್ಷಗಳ ಹಿಂದೆ ಮೈಸೂರಿನಿಂದ ವಿಮುಖವಾಗಿದ್ದ ಚಿತ್ರತಂಡಗಳು ಮತ್ತೆ ಬರುತ್ತಿವೆ. ಇಲ್ಲಿ ಕನ್ನಡ ಚಿತ್ರಗಳಿಗೆ ಉತ್ತಮ ಬೆಂಬಲವಿರುವುದು ಕೂಡ ಕಾರಣ.