ಬೆಳಗಾವಿ ಬೆಡಗಿ ಹಾಗೂ ದಕ್ಷಿಣ ಭಾರತದ ನಟಿ ಲಕ್ಷ್ಮೀ ರೈ ತಮ್ಮ ಬಿಜಿ ಶೆಡ್ಯೂಲ್‌ನ ಮಧ್ಯೆ ಸಮಯ ಮಾಡಿಕೊಂಡು ತನ್ನ ಕುಟುಂಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚೆನ್ನೈನಿಂದ ಬೆಳಗಾವಿಗೆ ವಿಮಾನ ಏರಲು ಪ್ರಯತ್ನಿಸಿದರೆ, ತಾನು ಪ್ರಯಾಣಿಸಬೇಕಾದ ಏರ್‌ಲೈನ್ಸ್ ಸಂಸ್ಥೆ ಹಾದಿ ತಪ್ಪಿಸಿ ಮುಂಬೈನಲ್ಲಿ ಇಳಿಸಿದೆ.
ಚೆನ್ನೈನಿಂದ ನೇರವಾಗಿ ಬೆಳಗಾವಿ ವಿಮಾನವಿಲ್ಲದಿರುವುದರಿಂದ ಲಕ್ಷ್ಮೀ ಬೆಂಗಳೂರು ತಲುಪಿ ಅಲ್ಲಿಂದ ಹುಬ್ಬಳ್ಳಿಗೆ ಫ್ಲೈಟ್ ಹಿಡಿದು ಪ್ರಯಾಣಿಸಬಹುದು ಎಂದು ತೀರ್ಮಾನಿಸಿ ಟಿಕೆಟ್ ಪಡೆದಿದ್ದ ಏರ್‌ಲೈನ್‌ನಲ್ಲಿ ಬೆಂಗಳೂರು ತಲುಪಿದಳು. ಆದರೆ, ಬೆಳಗ್ಗೆ 5.30ಕ್ಕೆ ಬಿಡಬೇಕಾಗಿದ್ದ ವಿಮಾನ 7.30ಗೆ ಟೇಕಾಫ್ ಆಗಿದ್ದರಿಂದ ಪ್ರಯಾಣಿಕರನ್ನು ಎರಡು ಗಂಟೆ ತಡವಾಗಿ ಬೆಂಗಳೂರಿಗೆ ತಂದುಬಿಟ್ಟಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಗೂ ಇದೇ ಸಂಸ್ಥೆಯ ಮತ್ತೊಂದು ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆ ವಿಮಾನ ಈಗಾಗಲೇ ಬೆಂಗಳೂರನ್ನು ಬಿಟ್ಟು ಹಾರಿತ್ತು. ಇದನ್ನು ಮನಗಂಡ ಏರ್‌ಲೈನ್ಸ್‌ನವರು, ಇನ್ನು ನೀವು ನಾಳೆ ಇದೇ ವಿಮಾನದಲ್ಲಿ ಪ್ರಯಾಣಿಸಬಹುದು. ದಯವಿಟ್ಟು ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ. ಆದರೆ, ಲಕ್ಷ್ಮೀ ಕುಟುಂಬದ ಕಾರ್ಯಕ್ರಮವಿದ್ದದ್ದೂ ಅದೇ ದಿನವಾದ್ದರಿಂದ ನಾನು ಈ ದಿನವೇ ಬೆಳಗಾವಿ ತಲುಪಬೇಕು. ಆದ್ದರಿಂದ ಹುಬ್ಬಳ್ಳಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡಿದ್ದರಿಂದ, ಏರ್‌ಲೈನ್ಸ್‌ನವರು ಮುಂಬೈ ವಿಮಾನ ಏರಿದರೆ ನಿಮಗೆ ಮುಂಬೈನಲ್ಲಿ ಹುಬ್ಬಳ್ಳಿ ಕನೆಕ್ಟಿಂಗ್ ಫ್ಲೈಟ್ ದೊರಕುತ್ತದೆ ಎಂದು ಈ ನಟಿಯನ್ನು ಹತ್ತಿಸಿ ಕಳಿಸಿದ್ದಾರೆ.
NRB
ಅದೇ ಮುಂಬೈ ತಲುಪಿದ ಲಕ್ಷ್ಮೀ ರೈಗೆ ಕಾದಿತ್ತು ಮತ್ತೊಂದು ಗ್ರಹಚಾರ. ಅಲ್ಲಿ ಆಕೆಯ ಲಗೇಜ್ ಮಿಸ್. ಗಾಬರಿಗೊಂಡು ಕಂಗಾಲಾಗಿರುವ ಲಕ್ಷ್ಮೀ, ಸಹೋದರಿ ಮಗುವನ್ನು ನೋಡುವ ಭಾಗ್ಯ ಹಾಗೂ ಕಾರ್ಯಕ್ರಮಕ್ಕೆ ಕಲ್ಲು ಹಾಕಿದ ಏರ್‌ಲೈನ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ ಈ ದಕ್ಷಿಣ ಭಾರತೀಯ ನಟಿ.
ಮೂಲತಃ ಫ್ಯಾಶನ್ ಲೋಕದಿಂದ ನೇರವಾಗಿ 2005ರಲ್ಲಿ 'ಕರ್ಕ ಕಸದರ" ಮಲೆಯಾಳಿ ಚಿತ್ರದಿಂದ ಪ್ರವೇಶ ಪಡೆದ ಲಕ್ಷ್ಮೀ ರೈ, ಹಲವಾರು ಮಲೆಯಾಳಂ, ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ 'ವಾಲ್ಮೀಕಿ', 'ಸ್ನೇಹಾನ ಪ್ರೀತಿನಾ', 'ಮಿಂಚಿನ ಓಟ', ಹಾಗೂ ಹಿಂದಿ ಚಿತ್ರ 'ತೇರೆ ಬಿನಾ ಜೀಯಾ ನಹಿನ್ ಜಾಯೇ' ಚಿತ್ರದಲ್ಲಿ ಅಭಿನಯಿಸಿದ್ದಾಳೆ.
ಮಲೆಯಾಳಂ ಚಿತ್ರ 'ಎವಿಡಮ್ ಸ್ವರ್ಗಮನು' ಚಿತ್ರದ ಸಹನಟನೆಗೆ 2009ರ ಫಿಲಂಫೇರ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿರುವ ಕೀರ್ತಿ ಹಾಗೂ 'ಏಷಿಯಾನೆಟ್ ಮೋಸ್ಟ್ ಪಾಪ್ಯೂಲರ್ ಆಕ್ಟ್ರೆಸ್ಸ್ ಅವಾರ್ಡ್ ಸಹ ಪಡೆದಿದ್ದಾರೆ.