ಗಾಂಧಿನಗರದ ಓಡುವ ಕುದುರೆ ಯಶ್ ಎಂದರೆ ತಪ್ಪಾಗಲಾರದು. ಈ ಕಲಾವಿದ ನಟಿಸಿರುವುದು ಕೆಲವೇ ಚಿತ್ರಗಳಾದರೂ ವಯಸ್ಸಿಗೆ ಮೀರಿದ ಪ್ರತಿಭೆ ಈತನಲ್ಲಿದೆ ಎಂಬುದು ಸ್ಯಾಂಡಲ್‌ವುಡ್ ಮಂದಿಯ ಮಾತು.
ಅದೇನೋ ನಿಜ. ಏಕೆಂದರೆ ನಟನೆಯ ಹುಚ್ಚು ಈತನಿಗೆ ಬಾಲ್ಯದಿಂದಲೇ ಮೂಡಿದೆ. ಕಾಲೇಜು ದಿನಗಳಲ್ಲಿ ಬೆಂಗಳೂರಿನ ನಾಟಕ ಶಾಲೆ `ಬೆನಕ' ತಂಡ ಸೇರಿಕೊಂಡು ಹಲವಾರು ನಾಟಕಗಳಾದ `ಜೋಕುಮಾರಸ್ವಾಮಿ', `ಕತ್ತಲೆ ಬೆಳಕು', `ಹಯವದನ', `ತಬರನಕಥೆ' ಮುಂತಾದ ನಾಟಕಗಳಲ್ಲಿ ಅಭಿನಯಿಸಿದ ಅಪಾರ ಮೆಚ್ಚುಗೆ ಗಳಿಸಿದ್ದ. ನಂತರ ಕಿರುತೆರೆ ನಿರ್ದೇಶಕ ಗುರುದತ್ ತಮ್ಮ ಧಾರಾವಾಹಿ `ಉತ್ತರಾಯಣ'ದಲ್ಲಿ ಯಶ್‌ಗೆ ಅವಕಾಶ ನೀಡಿದರು. ಟಿವಿ ಪರದೆಗೆ ಎಂಟ್ರಿ ಪಡೆದದ್ದೇ ತಡ ಚಿತ್ರರಂಗದ ಬಾಗಿಲು ಇವರಿಗೆ ತೆರೆಯಿತು.
ನಿರ್ದೇಶಕ ಶಶಾಂಕ್ ಹಾಗೂ ಮುಂಗಾರು ಮಳೆ ಕಾರ್ಯಕಾರಿ ನಿರ್ಮಾಪಕ ಜಿ, ಗಂಗಾಧರ್ ಅವರು ತಮ್ಮ ಬ್ಯಾನರಿನ `ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಿದರು. ಉತ್ತಮ ಪೋಷಕ ನಟನೆಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಅಲ್ಲಿಂದ ಯಶ್ ಅದೃಷ್ಟ ಖುಲಾಯಿಸಿತು.
ಅನಂತರ ರಾಕಿ, ಕಳ್ಳರ ಸಂತೆ, ಗೋಕುಲ, ತಮಸ್ಸು ಚಿತ್ರಗಳು ಗಳಿಕೆಯಲ್ಲಿ ಮೋಸ ಮಾಡಲಿಲ್ಲ. ಹೀಗಾಗಿ ಯಶ್ ಇದ್ದರೆ ಪೆಟ್ಟಿಗೆ ಖಾಲಿಯಂತೂ ಆಗುವುದಿಲ್ಲ ಎನ್ನುವಂತಾಗಿದೆ. ಪ್ರಕಾಶ್ ರೈ ಜೊತೆಯಲ್ಲೂ ಅಭಿನಯಿಸಿರುವ ಕೀರ್ತಿ ಇವರಿಗೆ ಸಂದಿದೆ.
ಈಗ ಯಶ್ `ರಾಜಧಾನಿ', `ಮೊದಲ ಸಲ', `ಕಿರಾತಕ' `ಮುಂಗಾರಿನ ಮೊದಲ ಹನಿ, `ಶುಭಾಶಯ', `ತುಂಬಾ ಇಷ್ಟ ಸ್ವಲ್ಪ ಕಷ್ಟ' ಚಿತ್ರಗಳ ನಟನೆಯಲ್ಲಿ ಬಿಜಿಯಾಗಿದ್ದಾರೆ.