ಇಲ್ಲ, ನಾನು ವಿಕ್ರಮ್ ಜತೆ ನಟಿಸುತ್ತಿಲ್ಲ: ರಮ್ಯಾ ಸ್ಪಷ್ಟನೆ
ಇಂತಹ ಸುದ್ದಿಯೊಂದು ಎಲ್ಲಿ ಹುಟ್ಟಿಕೊಂಡಿತ್ತೋ ಗೊತ್ತಿಲ್ಲ. ಆದರೆ ತಮಿಳು ಚಿತ್ರ 'ದೀವಾ ಮಗನ್'ನಲ್ಲಿ ವಿಕ್ರಮ್‌ಗೆ ನಾಯಕಿಯಾಗಿ ರಮ್ಯಾ ಯಾನೆ ದಿವ್ಯ ಸ್ಪಂದನ ನಟಿಸಲಿದ್ದಾರೆ ಎಂದು ಕೆಲವು ಪತ್ರಿಕೆಗಳೂ ವರದಿ ಮಾಡಿದ್ದವು. ಇದರಿಂದ ಸಹಜವಾಗಿಯೇ ಕಿರಿಕಿರಿ ಅನುಭವಿಸಿದ ಲಕ್ಕಿ ಸ್ಟಾರ್ ಈಗ ಸ್ಪಷ್ಟನೆ ನೀಡಿದ್ದಾರೆ. ನಾನು ಆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ.
MOKSHA
ತಮಿಳಿನ ವಿಕ್ರಮ್ ಜತೆ ನಾನು ಕೆಲಸ ಮಾಡುತ್ತೇನೆ ಎಂಬ ಕೆಲವು ವರದಿಗಳನ್ನು ಓದಿದ್ದೇನೆ. ಪ್ರಾಮಾಣಿಕವಾಗಿ ಹೇಳುವುದಾದರೆ ಈ ವಿಚಾರವೇ ನನಗೆ ಗೊತ್ತಿಲ್ಲ. ನಾನು ಆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಟ್ವಿಟ್ಟರಿನಲ್ಲಿ ಹೇಳಿದ್ದಾರೆ.
ಈಗಾಗಲೇ ಸಿಲಂಬರಸನ್, ಅರ್ಜುನ್ ಸರ್ಜಾ, ಶ್ಯಾಮ್, ಧನುಷ್, ಸೂರ್ಯ, ಜೀವಾ, ಸತ್ಯಾ ಮುಂತಾದ ತಮಿಳು ನಟರ ಜತೆ ನಟಿಸಿರುವ-ನಟಿಸುತ್ತಿರುವ ರಮ್ಯಾ, ಭಾರತೀಯ ಚಿತ್ರರಂಗದ ವಿಶಿಷ್ಟ ನಟ ಎಂದೇ ಹೆಸರು ಪಡೆದುಕೊಂಡಿರುವ ವಿಕ್ರಮ್ ಜತೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿತ್ತು.
ಮೋಹನ್ ನಟರಾಜನ್ ನಿರ್ಮಾಣದ ಎ.ಎಲ್. ವಿಜಯ್ ನಿರ್ದೇಶಿಸುತ್ತಿರುವ 'ದಿವಾ ಮಗನ್' ಚಿತ್ರದಲ್ಲಿ ವಾಸ್ತವದಲ್ಲಿ ನಟಿಸುತ್ತಿರುವುದು ಮಂಗಳೂರು ಮೂಲದ ಬಂಟರ ಹುಡುಗಿ, 'ಆರುಂಧತಿ' ಖ್ಯಾತಿಯ ಅನೂಷ್ಕಾ ಶೆಟ್ಟಿ. ಜತೆಗೆ ಅಮಲಾ ಪೌಲ್, ಸಂತಾನಮ್ ಮತ್ತು ಎಂ.ಎಸ್. ಭಾಸ್ಕರ್ ಮುಂತಾದವರಿದ್ದಾರೆ.
ಬಹುತೇಕ ಚಿತ್ರಗಳಲ್ಲಿ ಸವಾಲಿನ ಪಾತ್ರಗಳಲ್ಲಿ ನಟಿಸಿರುವ ವಿಕ್ರಮ್‌ಗೆ ಈ ಚಿತ್ರವೂ ಮಹತ್ವದ್ದು. ಯಾಕೆಂದರೆ ಇದರಲ್ಲಿ ಅವರು ಮಾನಸಿಕ ಅಸ್ವಸ್ಥನ ಪಾತ್ರ ಮಾಡುತ್ತಿದ್ದಾರೆ.
ಹಾಲಿವುಡ್‌ನ 'ಐಯಾಮ್ ಸ್ಯಾಮ್' ಸ್ಫೂರ್ತಿಯೊಂದಿಗೆ (ರಿಮೇಕ್) ಈ ಚಿತ್ರ ನಿರ್ಮಾಣವಾಗುತ್ತಿದೆ.