ಹೌದು, ನಿರ್ದೇಶಕ ಸೂರಿ ದುನಿಯಾ ಬದಲಾಗುತ್ತಿದೆ. ಇದುವರೆಗೆ ಕದ್ದು ಮುಚ್ಚಿ ಪ್ರೀತಿಸುತ್ತಿದ್ದ ಪಲ್ಲವಿಯನ್ನು ತನ್ನ ಹೃದಯದ ಅರಮನೆಗೆ ಅಧಿಕೃತವಾಗಿ ಕರೆ ತರುತ್ತಿದ್ದಾರೆ. ಅರ್ಥಾತ್ ಸೂರಿ ತನ್ನ ಬಹುಕಾಲದ ಪ್ರೇಯಸಿ ಪಲ್ಲವಿ ಎಂಬವರನ್ನು ಮದುವೆಯಾಗುತ್ತಿದ್ದಾರೆ.
ಇದೇ ಡಿಸೆಂಬರ್ 8ರ ಬುಧವಾರದಂದೇ ಮದುವೆ. ಕೊಲ್ಲೂರು ಮೂಕಾಂಬಿಕಾ ದೇವಳದಲ್ಲಿ ಸಿಂಪಲ್ ಆಗಿ ಸಮಾರಂಭ ನಡೆಯಲಿದೆ. ಎರಡು ಕುಟುಂಬದ ಸದಸ್ಯರು ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಮದುವೆ ಕೊಲ್ಲೂರಿನಲ್ಲೇ ನಡೆಯಬೇಕೆಂಬುದು ಸೂರಿ ತಾಯಿಯ ಬಯಕೆ. ದೇವಸ್ಥಾನದ ಆಡಳಿತ ಮಂಡಳಿ ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅರ್ಧ ಗಂಟೆ ಹೊತ್ತು ದೇವಳದಲ್ಲಿ ಕಾಲಾವಕಾಶ ನೀಡುವ ಭರವಸೆ ಸಿಕ್ಕಿದೆ. ಜಾಸ್ತಿ ಮಂದಿಗೆ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲವಂತೆ.
ಉಳಿದವರಿಗೆ ಬೇಸರ ಆಗಬಾರದೆಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಸೂರಿ ಇಟ್ಟುಕೊಂಡಿದ್ದಾರೆ. ಇದಕ್ಕೆ ಸಂಬಂಧಿಕರು, ಗೆಳೆಯರು, ಮಾಧ್ಯಮ ಮಿತ್ರರು ಮುಂತಾದವರನ್ನು ಸೂರಿ ಆಹ್ವಾನಿಸಿದ್ದಾರೆ.
'ದುನಿಯಾ' ಮೂಲಕ ಚಿತ್ರರಂಗಕ್ಕೆ ನಿರ್ದೇಶಕರಾಗಿ ಭಡ್ತಿ ಹೊಂದಿದ ಸೂರಿ, ನಂತರ ಇಂತಿ ನಿನ್ನ ಪ್ರೀತಿಯ, ಜಂಗ್ಲಿ ಮತ್ತು ಜಾಕಿ ಚಿತ್ರಗಳನ್ನು ನಿರ್ದೇಶಿಸಿ ಬಹುತೇಕ ಯಶಸ್ವಿಯಾದವರು. ನಾಲ್ಕು ಚಿತ್ರಗಳಲ್ಲಿ ಅವರು ಸೋಲು ಕಂಡಿದ್ದು ಇಂತಿ ನಿನ್ನ ಪ್ರೀತಿಯಲ್ಲಿ ಮಾತ್ರ.
ಅತ್ತ ಪಲ್ಲವಿ ಕೂಡ ಸೂರಿಯದ್ದೇ ಕ್ಯಾಟಗರಿಗೆ ಸೇರಿದವರು. ಸೂರಿಯಂತೆ ಅವರು ಕೂಡ ವರ್ಣಚಿತ್ರ ಕಲಾವಿದೆ. ದಾವಣಗೆರೆಯವರು. ಹಲವು ಸಮಯದಿಂದ ಇಬ್ಬರೂ ಸಂಪರ್ಕದಲ್ಲಿದ್ದವರು.
ಆದರೆ ಇದು ಲವ್ ಮ್ಯಾರೇಜ್ ಎಂಬುದನ್ನು ಒಪ್ಪಿಕೊಳ್ಳಲು ಸೂರಿ ನಿರಾಕರಿಸಿದ್ದಾರೆ. 'ನಮ್ಮದು ಪ್ರೇಮ ವಿವಾಹವಲ್ಲ. ಎರಡೂ ಕುಟುಂಬ ನೋಡಿ, ಒಪ್ಪಿಗೆ ಸೂಚಿಸಿ ನಡೆಯುತ್ತಿರುವ ಆರೇಂಜ್ಡ್ ಮ್ಯಾರೇಜ್. ಮೊದಲ ಬಾರಿ ನೋಡಿದಾಗಲೇ ಹುಡುಗಿ ಇಷ್ಟವಾಗಿದ್ದಾಳೆ. ಡಿಸೆಂಬರ್ 8ರಂದು ಬೆಳಿಗ್ಗೆ 9.30ಕ್ಕೆ ನಮ್ಮ ಮದುವೆ ನಡೆಯಲಿದೆ' ಎಂದಿದ್ದಾರೆ.
ಅತ್ತ ಪುನೀತ್ ರಾಜ್‌ಕುಮಾರ್-ಭಾವನಾ ಜೋಡಿಯ 'ಜಾಕಿ' ಅರ್ಧಶತಕ ಬಾರಿಸಿದೆ. ಇದೇ ಖುಷಿಯಲ್ಲಿರುವ ಹೊತ್ತಿಗೆ ಮದುವೆಯ ಸುದ್ದಿಯನ್ನು ಸೂರಿ ನೀಡಿದ್ದಾರೆ.