ರಂಗಾಯಣ ರಘು ಕೂಡ ಹೀರೋ ಆಗ್ತಿದ್ದಾರಾ? ಹೌದು, ಅದನ್ನು ಚಿತ್ರದ ಪ್ರಧಾನ ಪಾತ್ರಧಾರಿ ಎಂದಾದರೂ ಕರೆಯಬಹುದು. ಆದರೆ ರಘುವಿಗೆ ಇಲ್ಲಿ ನಾಯಕಿಯೂ ಇರುವುದರಿಂದ ನಾಯಕನೆಂದೇ ಕರೆಯಬಹುದು. ಲಕ್ಷ್ಮಿ ಶರ್ಮಾ ಎಂಬ ನಟಿಯ ಜತೆ ರಘು ಬೆಳ್ಳಿತೆರೆಯನ್ನು ಆವರಿಸಿಕೊಳ್ಳಲಿದ್ದಾರೆ.
ಈ ಹಿಂದೆ ಸಾಧು ಕೋಕಿಲ, ಕೋಮಲ್ ಕುಮಾರ್, ಟೆನ್ನಿಸ್ ಕೃಷ್ಣ ಮುಂತಾದವರು ಪ್ರಧಾನ ಪಾತ್ರಧಾರಿಗಳಾಗಿ ಹಾಸ್ಯ ಚಿತ್ರಗಳಲ್ಲಿ ಮಿಂಚಿದವರು. ಈಗ ಅವರ ಸಾಲಿಗೆ ರಂಗಾಯಣ ರಘು ಕೂಡ ಸೇರ್ಪಡೆಯಾಗುತ್ತಿದ್ದಾರೆ.
ಚಿತ್ರದ ಹೆಸರು 'ರಾಮ ರಾಮ ರಘು ರಾಮ'. ಜಿ.ಎನ್. ರಾಜಶೇಖರ ನಾಯ್ಡು ಮತ್ತು ಬಿ.ವಿ. ಪ್ರಮೋದ್ ನಿರ್ಮಿಸುತ್ತಿರುವ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಆರ್. ರಘುರಾಜ್. ದರ್ಶನ್ 'ಬಾಸ್' ಸಿನಿಮಾ ನಿರ್ದೇಶಿಸಿರುವ ಇವರು ಮೂಲತಃ ತೆಲುಗಿನವರು.
'ರಾಮ ರಾಮ ರಘು ರಾಮ'ದಲ್ಲಿ ದೊಡ್ಡಣ್ಣ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ಜತೆ ಇದುವರೆಗೂ ದೊಡ್ಡಣ್ಣ ನಟಿಸಿರಲಿಲ್ಲ. ಹಾಗಾಗಿ ಈ ಜೋಡಿಯ ಕುರಿತು ಸಹಜವಾಗಿಯೇ ಕುತೂಹಲ ಕೆರಳಿದೆ.
ಉಳಿದಂತೆ ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಹಾಸ್ಯಮಂಜರಿ ಇರುತ್ತದೆ. ಶೋಭರಾಜ್ ಕೂಡ ಇರುತ್ತಾರೆ. ಹಾಡೊಂದರಲ್ಲಿ ರಚನಾ ಮೌರ್ಯ ಕುಣಿದಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಡಿಸೆಂಬರ್ ಅಂತ್ಯ ಅಥವಾ ಜನವರಿ ಆರಂಭದಲ್ಲಿ ತೆರೆ ಕಾಣಲಿದೆ.
ಹೆಸರೇ ಹೇಳುವಂತೆ ಇದೊಂದು ಕಾಮಿಡಿ ಸಿನಿಮಾ. ಫ್ಯಾಮಿಲಿ ಮನರಂಜನೆಗೆ ಹೆಚ್ಚು ಒತ್ತು ಕೊಡಲಾಗಿದೆ. ಯಾವುದೇ ವಯಸ್ಸಿನವರಾದರೂ ನೋಡಬಹುದು ಎನ್ನುತ್ತಾರೆ ನಿರ್ದೇಶಕ ರಘುರಾಜ್.
ರಂಗಾಯಣ ರಘು ಇಲ್ಲಿ ಪೊಲೀಸ್ ಪೇದೆ. ದೊಡ್ಡಣ್ಣ ಇನ್ಸ್‌ಪೆಕ್ಟರ್. ಸಾಮಾನ್ಯ ಮನುಷ್ಯನೊಬ್ಬ ಮನಸ್ಸು ಮಾಡಿದರೆ ಸಮಾಜಕ್ಕೆ ಯಾವ ರೀತಿಯ ಕೊಡುಗೆ ನೀಡಬಹುದು ಎಂಬುದನ್ನು ಹಾಸ್ಯದ ಧಾಟಿಯಲ್ಲಿ ಹೇಳಿದ್ದೇವೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.