ತನ್ನ ಬಹುನಿರೀಕ್ಷೆಯ 'ಸೂಪರ್' ಅಭಿಮಾನಿಗಳನ್ನು ರೋಮಾಂಚನಗೊಳಿಸಿರುವುದು ಸಹಜವಾಗಿಯೇ ಉಪೇಂದ್ರರಿಗೆ ಸಂತಸ ತಂದಿದೆ. ಇದರಿಂದ ನನಗೆ ನೂರಾನೆಯ ಬಲ ಬಂದಿದೆ. ಇಂತಹ ಯಶಸ್ಸಿಗೆ ಕಾರಣರಾದ ಅಭಿಮಾನಿಗಳಿಗೆ ನಾನು ಋಣಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಚಿತ್ರ ಬಿಡುಗಡೆಗೆ ಮೊದಲು ಆತಂಕದಿಂದಲೇ ಕ್ಷಣಗಳನ್ನು ಮುಂದೂಡುತ್ತಿದ್ದ ಉಪೇಂದ್ರ ಈಗ ದೊರೆತಿರುವ ಅಭೂತಪೂರ್ವ ಯಶಸ್ಸಿನಿಂದಾಗಿ ಸುಲಭವಾಗಿ ಮಾತಿಗೂ ಸಿಗುತ್ತಿದ್ದಾರೆ. ಸಂತೋಷದಿಂದಲೇ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದಾರೆ. ಉಪ್ಪಿ ಏನು ಹೇಳುತ್ತಿದ್ದಾರೆ ಎಂಬುದನ್ನು ಅವರ ಮಾತುಗಳಲ್ಲೇ ಕೇಳಿ.
PR
ರಾಜ್ಯದಾದ್ಯಂತ ನೂರಾರು ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣಲು ಕಾರಣರಾದ ಜನತೆಗೆ ನಾನು ಮೊದಲು ಧನ್ಯವಾದ ಅರ್ಪಿಸುತ್ತಿದ್ದೇನೆ. ಈ ಚಿತ್ರ ಕಂಡಿರುವ ಯಶಸ್ಸಿಗೆ ಅಭಿಮಾನಿಗಳು ಮತ್ತು ಪ್ರೇಕ್ಷಕರೇ ಕಾರಣರು. ಈಗಲೂ ಚಿತ್ರ ನೋಡಲು ಟಿಕೆಟ್ ಸಿಗುತ್ತಿಲ್ಲ ಎಂಬ ವರದಿಗಳು ಬಂದಿವೆ.
ಪ್ರತಿಯೊಬ್ಬರ ಅಭಿಪ್ರಾಯ ಪಡೆಯಲು ನನಗೆ ಅಸಾಧ್ಯವಾದರೂ, ನೇರ ಪ್ರಸಾರದ ಕಾರ್ಯಕ್ರಮಗಳ ಮೂಲಕ ಕೆಲವರೊಂದಿಗೆ ಮಾತನಾಡಿದ್ದೇನೆ. ಇತರೆ ಕೆಲವರು ಮುಖಾಮುಖಿಯಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಒಟ್ಟಾರೆ ನಾನಂತೂ ಫುಲ್ ಖುಷ್. ನಮ್ಮ ಚಿತ್ರತಂಡದ ಅವಿರತ ಶ್ರಮದಿಂದಾಗಿ ಸಿನಿಮಾ ಅತ್ಯುತ್ತಮವಾಗಿ ಮೂಡಿ ಬಂದಿದೆ.
ಈ ಅಭೂತಪೂರ್ವ ಪ್ರತಿಕ್ರಿಯೆ ನನಗೆ ನೂರು ಆನೆಗಳ ಬಲವನ್ನು ನೀಡಿದೆ. ಇದರಿಂದಾಗಿ ಮುಂದೆ ಇನ್ನಷ್ಟು ಉತ್ತಮ ಚಿತ್ರಗಳನ್ನು ಮುಂದಿನ ದಿನಗಳಲ್ಲಿ ನೀಡಲು ಧೈರ್ಯದಿಂದ ಮುನ್ನಡೆಯುವ ಸಾಮರ್ಥ್ಯ, ಆತ್ಮವಿಶ್ವಾಸ ಬಂದಿದೆ. ದೊಡ್ಡ ನಗರಗಳು ಹಾಗೂ ಸಣ್ಣ ಕೇಂದ್ರಗಳಲ್ಲಿನ ಪ್ರತಿಕ್ರಿಯೆಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಚಿತ್ರ ನೋಡಿದವರಿಗೆ ಧನ್ಯವಾದ ಹೇಳುತ್ತಾ, ನೋಡದವರು ಮುಂದಿನ ದಿನಗಳಲ್ಲಿ ನೋಡಿ ಎಂದು ಮನವಿ ಮಾಡುತ್ತಿದ್ದೇನೆ.
ಮೂರೇ ದಿನದಲ್ಲಿ 3.5 ಕೋಟಿ ಗಳಿಕೆ... ಡಿಸೆಂಬರ್ 3ರಂದು ಬಿಡುಗಡೆಯಾದ 'ಸೂಪರ್' ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಮೊದಲ ಮೂರು ದಿನಗಳಲ್ಲೇ 2.5 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ. ಇದು ಪುನೀತ್ ರಾಜ್‌ಕುಮಾರ್ ಅವರ 'ಜಾಕಿ' ಮೊದಲ ಮೂರು ದಿನಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕಾಲಂತೂ ನೆಲದಲ್ಲಿ ನಿಲ್ಲುತ್ತಿಲ್ಲ.
ತನ್ನ ನಿರ್ಮಾಣ ಸಂಸ್ಥೆಯ 25ನೇ ಚಿತ್ರ ಈ ರೀತಿಯ ಯಶಸ್ಸು ಕಂಡಿರುವುದರ ಬಗ್ಗೆ ರಾಕ್‌ಲೈನ್ ತನ್ನ ಸಂತಸ ಹಂಚಿಕೊಂಡಿದ್ದು, ಅವರ ಮಾತುಗಳಲ್ಲೇ ಕೇಳಿ.
ಚಿತ್ರವು ಬಾಕ್ಸಾಫೀಸಿನಲ್ಲಿ ಅತ್ಯುತ್ತಮ ಆರಂಭ ಪಡೆದಿದೆ. ಸಾಮಾನ್ಯವಾಗಿ ಚಿತ್ರ ಬಿಡುಗಡೆಯಾದ ಒಂದು ವಾರದ ನಂತರ ನಮಗೆ ಗಳಿಕೆಯ ಕುರಿತು ಗೊತ್ತಾಗುತ್ತದೆ. ಹಾಗಾಗಿ ನಾನು ಈಗಲೇ ನಿರ್ದಿಷ್ಟವಾಗಿ ಇಷ್ಟೇ ಗಳಿಕೆಯಾಗಿದೆ ಎಂದು ಖಚಿತವಾಗಿ ಹೇಳಲಾರೆ. ಆದರೂ ಮೂರು ದಿನಗಳಲ್ಲಿ ಅಂದಾಜು 2.5 ಕೋಟಿ ರೂ. ಗಳಿಸಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆ.
ರಾಜ್ಯದಾದ್ಯಂತ ಸುಮಾರು 181 ಚಿತ್ರಮಂದಿರಗಳಲ್ಲಿ 'ಸೂಪರ್' ತೆರೆ ಕಂಡಿದೆ. ಇಲ್ಲಿ ಥಿಯೇಟರುಗಳ ಸಂಖ್ಯೆ ಮುಖ್ಯವಾಗುವುದಿಲ್ಲ. ಯಾಕೆಂದರೆ ಕೆಲವು ಚಿತ್ರಮಂದಿರಗಳು ದಿನದಲ್ಲಿ ನಾಲ್ಕು ಪ್ರದರ್ಶನ ಇಟ್ಟುಕೊಂಡಿರುತ್ತವೆ. ಆದರೆ ಇನ್ನು ಕೆಲವು ಮೂರು, ಎರಡು ಮತ್ತು ಒಂದು ಪ್ರದರ್ಶನಕ್ಕಷ್ಟೇ ಸೀಮಿತ ಮಾಡುತ್ತವೆ. ಇಲ್ಲಿ ದಿನದಲ್ಲಿ ಒಟ್ಟು ಎಷ್ಟು ಪ್ರದರ್ಶನ ಕಂಡಿದೆ ಎನ್ನುವುದು ಮುಖ್ಯವಾಗುತ್ತದೆ. ಪ್ರಸಕ್ತ ಈ ಚಿತ್ರವು ದಿನಕ್ಕೆ 450 ಪ್ರದರ್ಶನಗಳನ್ನು ಕಾಣುತ್ತಿದೆ.
PR
ಶೀಘ್ರದಲ್ಲೇ ತಮಿಳು-ತೆಲುಗು... 'ಸೂಪರ್' ಚಿತ್ರವನ್ನು ಚಿತ್ರೀಕರಣ ಸಂದರ್ಭದಲ್ಲೇ ಮೂರು ಭಾಷೆಗಳಿಗೆ ಹೊಂದಾಣಿಕೆಯಾಗುವಂತೆ ಚಿತ್ರೀಕರಿಸಲಾಗಿತ್ತು. ಕನ್ನಡ ಮೊದಲು ಬಿಡುಗಡೆಯಾಗಿದೆ. ಅತ್ತ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳ ಅಭಿಮಾನಿಗಳು ತೆಲುಗು ಮತ್ತು ತಮಿಳು ಆವೃತ್ತಿಗಳಿಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ.
ಮೂರು ಆವೃತ್ತಿಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲಾ ಮೂರು ಭಾಷೆಗಳಲ್ಲೂ ಕಥೆ ಒಂದೇ ರೀತಿಯಿರುತ್ತದೆ. ಡಿಸೆಂಬರ್ ತಿಂಗಳ ಕೊನೆಯಲ್ಲಿ ಅಥವಾ ಜನವರಿ ಆರಂಭದಲ್ಲಿ ಇತರೆ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ರಾಕ್‌ಲೈನ್ ಹೇಳಿದ್ದಾರೆ.
ಅಭಿಮಾನಿಗಳ ಮಾತುಗಳನ್ನೂ ಕೇಳಿ... 'ವೆಬ್‌ದುನಿಯಾ'ದಲ್ಲೂ ಉಪ್ಪಿ ಅಭಿಮಾನಿಗಳು ತರಹೇವಾರಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬಹುತೇಕ ಮಂದಿ ಚಿತ್ರವನ್ನು ಅಪಾರವಾಗಿ ಮೆಚ್ಚಿದ್ದು, ನಿರ್ದೇಶಕರ ಮೇಲೆ ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿದ್ದಾರೆ.
ಭಾರತೀಯರಿಗಿದು ವಿಶೇಷ ಚಿತ್ರ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ತಮವಾಗಿ ಮೂಡಿ ಬಂದಿರುವ ನೋಡಲೇಬೇಕಾದ ಚಿತ್ರವಿದು. ಚಿತ್ರವನ್ನು ದಯವಿಟ್ಟು ಆರಂಭದಿಂದಲೇ ನೋಡಿ. - ರಾಕೇಶ್ ಮಂಗಳೂರು
24 ಗಂಟೆ ಕಿತ್ತಾಡಿಕೊಂಡಿರುವ ನಮ್ಮ ರಾಜಕೀಯದ ಕೀಚಕರು ಈ ಸಿನಿಮಾವನ್ನು ನೋಡಿ. - ಗಣೇಶ್
ಎಲ್ಲರೂ ಚಿತ್ರ ಚೆನ್ನಾಗಿದೆ, ಚೆನ್ನಾಗಿದೆ ಅಂತೀರಲ್ಲ. ಈ ಫಿಲ್ಮಿಂದ ನೀವು ಏನು ತಿಳಿದುಕೊಂಡಿದ್ದೀರಾ? ಎಲ್ಲರಿಗೂ ಉಪೇಂದ್ರ ಸರಿಯಾಗಿ ಉಗಿದಿದ್ದಾರೆ. ಇದು ಫಿಲ್ಮ್, ನಿಜ ಅಲ್ಲ. ಉಪೇಂದ್ರ ಅಲ್ಲ, ಅವರನ್ನು ಮೀರಿಸುವವರು ಬಂದರೂ ಭಾರತ ಬದಲಾವಣೆಯಾಗಲ್ಲ. ಉಪ್ಪಿ ರಾಜಕೀಯಕ್ಕೆ ಬಂದರೂ ಮಾಡುವುದು ಇಷ್ಟೇ. ಪ್ರೇಕ್ಷಕರು ಚಿತ್ರವನ್ನು ನೋಡಿ ಈ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ನೋಡಬೇಕು. - ಸಂತು
ಪ್ರಸಕ್ತ ರಾಜಕೀಯದ ಬಗ್ಗೆ ಅರಿಯಲು ಸೂಪರ್ ಸಿನಿಮಾ ನೋಡಿ. ಅದಕ್ಕೆ ಪರಿಹಾರ ಕೂಡ ಸೂಪರ್ ಚಿತ್ರದಿಂದಲೇ ಪಡೆಯಿರಿ. ನಿರಾತಂಕವಾಗಿ ಯಾವುದನ್ನು ಬಚ್ಚಿಡದೆ ಉಪ್ಪಿ ಸೂಪರ್ ಆಗಿ ನಿರ್ದೇಶಿಸಿದ್ದಾರೆ. ಚಿತ್ರದ ಮೊದಲ 20 ನಿಮಿಷಗಳಲ್ಲೇ ಕೊಟ್ಟ ಕಾಸಿಗೆ ಮೋಸ ಇಲ್ಲ ಎಂದು ಗೊತ್ತಾಗಿ ಬಿಡುತ್ತದೆ. - ಕುಮಾರ್ ಗೌಡ
ಉಪ್ಪಿಯಿಂದ ಈ ರೀತಿಯ ನಿರ್ದೇಶನವನ್ನು ನಾನು ಯಾವತ್ತೂ ನಿರೀಕ್ಷಿಸಿರಲಿಲ್ಲ. ನಮಗೆ ನಿಜಕ್ಕೂ ನಿರಾಸೆಯಾಗಿದೆ. ಇದಕ್ಕಿಂತ 'ಬಿಸಿಲೆ' ಚಿತ್ರ ಉತ್ತಮವಾಗಿದೆ. - ರಘು ಸಿ.ಆರ್.ಪಿ.
ಉಪ್ಪಿ ಗ್ರೇಟ್. ನಿಮ್ಮ ನಿರ್ದೇಶನ ಅದ್ಭುತ. ಇಂತಹ ಸಿನಿಮಾಕ್ಕಾಗಿ ಜನರು ಕಾಯುತಿದ್ದರು. ಭಾರತೀಯ ಚಿತ್ರರಂಗದಲ್ಲೇ ಈ ರೀತಿಯ ಸಿನಿಮಾವನ್ನು ಯಾರು ನಿರ್ದೆಶಿಸಿರಲಿಲ್ಲ. ನಿರ್ದೇಶಕರಲ್ಲೇ ನೀವು ಡಿಪರೆಂಟ್ ನಿರ್ದೇಶಕರು. - ಆದಿತ್ಯ
ರಾಜಕಾರಣಿಗಳು ಬಂದು ದಯವಿಟ್ಟು ಈ ಚಿತ್ರವನ್ನು ನೋಡಬೇಕು. - ಜ್ಯೋತಿ
ಕನ್ನಡಕ್ಕೊಬ್ಬ ರಜನೀಕಾಂತ್ ಬೇಕಿತ್ತು. ಅದು ಉಪೇಂದ್ರ ಅವರ ರೂಪದಲ್ಲಿ ಸಿಕ್ಕಿದೆ. ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ. - ಗುರುಪ್ರಸಾದ್
ಚಿತ್ರ ಚೆನ್ನಾಗಿದೆ. ಆದರೆ ನಿಮ್ಮ ಈ ಚಿತ್ರ ನಿಮ್ಮ 'ಉಪೇಂದ್ರ' ಚಿತ್ರಕ್ಕೆ ತದ್ವಿರುದ್ಧವಾಗಿದೆ. ಆ ಚಿತ್ರದಲ್ಲಿ 'ನಾನು' ಅನ್ನೋದನ್ನು ಬಿಟ್ರೆ ಮಾನವ ಉದ್ಧಾರ ಆಗುತ್ತಾನೆ ಎಂದಿದ್ದ ನೀವು ಈಗ ರಾಜ್ಯವನ್ನು ಜನರ ಹೆಸರಿಗೆ ಬರೆದು ಕೊಟ್ಟು, ನಾನು-ನನ್ನದು ಅನ್ನದೆ ಉದ್ಧಾರ ಆಗಬಹುದು ಅನ್ನೋದು ತಪ್ಪಲ್ವಾ? - ಜನಾರ್ದನ್