ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ವಿಷ್ಣುವರ್ಧನ' ಶೀರ್ಷಿಕೆ ಬದಲಾವಣೆಗೆ ದ್ವಾರಕೀಶ್ ನಿರ್ಧಾರ? (Vishnuvardhana | Dwarakish | Sampath Kumar | Sudeep)
ಸುದ್ದಿ/ಗಾಸಿಪ್
Bookmark and Share Feedback Print
 
ಕೆಲ ತಿಂಗಳ ಹಿಂದೆ ಭುಗಿಲೆದ್ದಿದ್ದ 'ವಿಷ್ಣುವರ್ಧನ' ಶೀರ್ಷಿಕೆ ಬದಲಾಯಿಸಲು ನಿರ್ದೇಶಕ-ನಿರ್ಮಾಪಕ ದ್ವಾರಕೀಶ್ ನಿರ್ಧರಿಸಿದ್ದಾರೆಯೇ? ಹೌದು ಎನ್ನುತ್ತಿವೆ ಮೂಲಗಳು. 'ವಿಷ್ಣುವರ್ಧನ' ಶೀರ್ಷಿಕೆ ಸಿಗದೇ ಹೋದರೆ, ಸಾಹಸಸಿಂಹ ವಿಷ್ಣುವರ್ಧನ್ ಮೂಲ ನಾಮಧೇಯ 'ಸಂಪತ್ ಕುಮಾರ್' ಹೆಸರಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ನಿರ್ಧಾರಕ್ಕೆ ಚಿತ್ರತಂಡ ಬಂದಿದೆ.
PR

ಆದರೆ ಇದನ್ನು ಸ್ವತಃ ದ್ವಾರಕೀಶ್ ತಳ್ಳಿ ಹಾಕಿದ್ದಾರೆ. ಸುದೀಪ್-ಪ್ರಿಯಾಮಣಿ ನಾಯಕ-ನಾಯಕಿಯರಾಗಿರುವ 'ರಾಜಾ ವಿಷ್ಣುವರ್ಧನ' ಚಿತ್ರದ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ. ಆ ಚಿತ್ರ ಅದೇ ಹೆಸರಿನಲ್ಲಿ ಬಿಡುಗಡೆಯಾಗುತ್ತದೆ. 'ಸಂಪತ್ ಕುಮಾರ್' ಚಿತ್ರವನ್ನೂ ಮಾಡುತ್ತೇನೆ. ಅದರಲ್ಲೂ ಸುದೀಪ್ ನಾಯಕರಾಗಿರುತ್ತಾರೆ. ಅದು ಬೇರೆಯದೇ ಚಿತ್ರ ಎಂದಿದ್ದಾರೆ.

ಇದರೊಂದಿಗೆ ಭಾರತಿ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ನಡುವಿನ ಟೈಟಲ್ ವಿವಾದ ಮತ್ತೆ ಗರಿಗೆದರಿದೆ. ಆರೋಪ-ಪ್ರತ್ಯಾರೋಪಗಳು ಮತ್ತೆ ಶುರುವಾಗಿವೆ. ಒಂದು ಕಡೆಯಿಂದ ವಾಣಿಜ್ಯ ಮಂಡಳಿಯ ಮೇಲೆ ಒತ್ತಡ ಹೇರಲಾಗುತ್ತಿದೆ. ಅತ್ತ ಭಾರತಿ ಜತೆ ಸಂಧಾನ ನಡೆಸಲು ಕೂಡ ಯತ್ನಿಸಲಾಗುತ್ತಿದೆ.

'ವಿಷ್ಣುವರ್ಧನ' ಎಂಬ ಹೆಸರಿಡಲು ದ್ವಾರಕೀಶ್ ಅವರಿಗೆ ಇನ್ನೂ ವಾಣಿಜ್ಯ ಮಂಡಳಿ ಅನುಮತಿ ನೀಡಿಲ್ಲ. ಹಾಗಾಗಿ ಅವರು ನ್ಯಾಯಾಲಯಕ್ಕೆ ಹೋಗಲಿದ್ದು, ಒಂದೆರಡು ದಿನಗಳಲ್ಲಿ ನೋಟೀಸ್ ಹೊರಡಿಸಲಿದ್ದಾರೆ. ಅಲ್ಲಿ ಚಿತ್ರತಂಡಕ್ಕೆ ಸೋಲಾದಲ್ಲಿ, ಆಗ 'ವಿಷ್ಣುವರ್ಧನ' ಶೀರ್ಷಿಕೆ ಬದಲು, 'ಸಂಪತ್ ಕುಮಾರ್' ಹೆಸರಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
PR

ನನ್ನ ವಿರುದ್ಧ ವಾಣಿಜ್ಯ ಮಂಡಳಿ ದ್ವೇಷ ಸಾಧನೆ ಮಾಡುತ್ತಿದೆ. ನಾನು ಕೇಳಿದ ಪ್ರೀತಿಯ 'ವಿಷ್ಣುವರ್ಧನ' ಶೀರ್ಷಿಕೆಯನ್ನು ನೀಡಲು ಹಿಂದೇಟು ಹಾಕುತ್ತಿದೆ. ಆದರೂ ನಾನು ಚಿತ್ರದ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ. ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ ಎಂದು ದ್ವಾರಕೀಶ್ ಹೇಳಿದ್ದಾರೆ.

ವಿಷ್ಣುವರ್ಧನ್ ಯಾರ ಸೊತ್ತೂ ಅಲ್ಲ. ವಿಷ್ಣುವರ್ಧನ್ ಎಂಬ ಹೆಸರಿಟ್ಟಿರುವುದು ಅವರ ಪತ್ನಿ ಭಾರತಿ ಅಲ್ಲ. ಅವರ ಹೆತ್ತವರು. ಅಷ್ಟಕ್ಕೂ ವಿಷ್ಣುವರ್ಧನ್ ಎಂದರೆ ಚಿತ್ರನಟ ಮಾತ್ರವಲ್ಲ. ಆ ಹೆಸರಿನ ರಾಜ ನಮ್ಮಲ್ಲಿದ್ದ. ಒಬ್ಬ ಕ್ಯಾಮರಾಮ್ಯಾನ್, ತಮಿಳಿನಲ್ಲಿ ಒಬ್ಬ ನಿರ್ದೇಶಕರೂ ಇದ್ದಾರೆ. ನೂರಾರು ಜನ ಇದ್ದಾರೆ. ಅವರ ಹೆಸರನ್ನಿಡಲು ಭಾರತಿಯವರಲ್ಲಿ ಯಾಕೆ ಕೇಳಬೇಕು. ವಿಷ್ಣುವರ್ಧನ್ ಟೈಟಲ್ ನೀಡಲು ಭಾರತಿಯವರು ಯಾರು? ಖಂಡಿತಾ ನನ್ನ ನಿಲುವಿನಲ್ಲಿ ಯಾವುದೇ ಸಡಿಲಿಕೆಯಿಲ್ಲ ಎಂದು ಹಿರಿಯ ನಿರ್ದೇಶಕ ಪಟ್ಟು ಹಿಡಿದಿದ್ದಾರೆ.

'ಸಂಪತ್ ಕುಮಾರ್' ವಿಷ್ಣುರವರ ಮೂಲ ಹೆಸರು. ಇದರ ಕುರಿತು ಕೂಡ ಆಕ್ಷೇಪಗಳು ಬಂದರೆ ಏನು ಮಾಡುತ್ತೀರಿ ಎಂದಾಗ, ಆ ಬಗ್ಗೆ ತಿಳಿದಿಲ್ಲ. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಸುದೀಪ್ ನಾಯಕನಾಗಿರುವ ನನ್ನ ಮುಂದಿನ ಚಿತ್ರದ ಹೆಸರದು. ಯಾರು ತಡೆಯುತ್ತಾರೋ ನೋಡೋಣ ಎಂದಿದ್ದಾರೆ.

ಅಂದ ಹಾಗೆ, ದ್ವಾರಕೀಶ್ ಹೇಳುತ್ತಿರುವ ಇವೆರಡೂ ಚಿತ್ರಗಳಲ್ಲಿ ಸಾಹಸಿಂಹ ವಿಷ್ಣುವರ್ಧನ್ ಜೀವನದ ಕುರಿತ ಯಾವುದೇ ಅಂಶಗಳಿರುವುದಿಲ್ಲವಂತೆ. 'ವಿಷ್ಣುವರ್ಧನ' ಚಿತ್ರದ ಮುಂದುವರಿದ ಭಾಗವೇ ಎಂದಾಗ, ಆ ಕುರಿತು ಈಗಲೇ ಏನೂ ಹೇಳಲಾಗದು. ವಿಷ್ಣು ಜೀವನ ಚರಿತ್ರೆಯಂತೂ ಅಲ್ಲ. ನನಗೆ ಇಷ್ಟವಾಗಿದೆ, ಅದಕ್ಕೆ ಈ ಟೈಟಲ್ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ, ದ್ವಾರಕೀಶ್, ಸಂಪತ್ ಕುಮಾರ್, ಸುದೀಪ್, ಭಾರತಿ