ಚಿತ್ರವೊಂದು ಹಿಟ್ ಬೇಕಾದರೆ ಅದಕ್ಕೆ ಪ್ರಮುಖವಾಗಿ ಬೇಕಾಗಿರುವುದು ಪ್ರಚಾರ. ಅದು ಸಿಗದೇ ಹೋದರೆ ಸಿನಿಮಾ ಎಷ್ಟೇ ಉತ್ತಮವಾಗಿದ್ದರೂ ಬಾಕ್ಸಾಫೀಸಿನಲ್ಲಿ ಮುಗ್ಗರಿಸುತ್ತದೆ. ಅದೇ ನಿಟ್ಟಿನಲ್ಲಿ 'ಮಂದಹಾಸ' ಚಿತ್ರತಂಡ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಉಚಿತವಾಗಿ ಆಡಿಯೋ ಸಿಡಿಗಳನ್ನು ಹಂಚುವುದೇ ಇದರ ತಂತ್ರ.
ಪತ್ರಿಕೆಗಳು, ಟಿವಿ ಚಾನೆಲ್‌ಗಳು ಮತ್ತು ಎಫ್ಎಂ ರೇಡಿಯೋ ಚಾನೆಲ್‌ಗಳ ಮೂಲಕ ಜನರಿಗೆ ನೇರವಾಗಿ 30,000ದಷ್ಟು ಆಡಿಯೋ ಸಿಡಿಗಳನ್ನು ಉಚಿತವಾಗಿ ಹಂಚುವ ಯೋಜನೆ 'ಮಂದಹಾಸ' ಚಿತ್ರತಂಡದ್ದು. ಆದರೆ ಯಾವ ರೀತಿಯಲ್ಲಿ ಹಂಚಲಾಗುತ್ತದೆ? ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆಯೇ ಎಂಬ ಮಾಹಿತಿಗಳನ್ನು ಬಹಿರಂಗಪಡಿಸಲಾಗಿಲ್ಲ.
ಈ ರೀತಿಯಾಗಿ ಜನರಿಗೆ ಸುಲಭವಾಗಿ ಆಡಿಯೋ ತಲುಪಿದಲ್ಲಿ, ಹಾಡುಗಳು ಹಿಟ್ ಆಗುತ್ತವೆ ಎನ್ನುವುದು ಚಿತ್ರದ ನಿರ್ಮಾಪಕ ಬಸವ ರೆಡ್ಡಿಯವರ ಚಿಂತನೆ. ಸಂಗೀತ ನಿರ್ದೇಶಕ ವೀರ್ ಸಂಪತ್ ಅವರ ಮಟ್ಟುಗಳ ಬಗ್ಗೆಯೂ ರೆಡ್ಡಿಯವರಲ್ಲಿ ಅಪಾರ ಭರವಸೆಯಿದೆ. ಇದಕ್ಕೆ ಕಾರಣ ಸೂಫಿ ಸಂಗೀತಯವನ್ನು ಬಳಕೆ ಮಾಡಿರುವುದು.
ಈ ಚಿತ್ರದ ಆಡಿಯೋ ಸಿಡಿಗಳನ್ನು ಮಾರುಕಟ್ಟೆ ಮಾಡದೇ ಇರಲು ನಿರ್ಧರಿಸಿರುವುದರ ಹಿಂದಿನ ಮತ್ತೊಂದು ಕಾರಣ ಆಡಿಯೋ ಕಂಪನಿಗಳು ಆಸಕ್ತಿ ತೋರಿಸದೇ ಇರುವುದು.
ಇಂದಿನ ಆಡಿಯೋ ಮಾರುಕಟ್ಟೆ ದೊಡ್ಡದೊಡ್ಡ ನಟರನ್ನು ಕೇಂದ್ರೀಕರಿಸಿರುವುದರಿಂದ ನಮ್ಮ ಆಡಿಯೋವನ್ನು ಯಾರಾದರೂ ಖರೀದಿಸಲು ಮುಂದೆ ಬರುತ್ತಾರೆ ಎಂಬ ಭರವಸೆ ಇರಲಿಲ್ಲ. ಕಮಿಷನ್ ಆಧಾರದಲ್ಲಿ ಕ್ಯಾಸೆಟ್‌ಗಳ ಮಾರಾಟ ಮಾಡಲು ಮುಂದಾದರೂ ನಮ್ಮ ಜತೆ ಕೈ ಜೋಡಿಸಲು ಯಾರೂ ಸಿದ್ಧರಿಲ್ಲ. ಆದರೆ ನಮ್ಮ ವಿನೂತನ ಪ್ರಯೋಗ ಯಶಸ್ವಿಯಾಗುವ ಭರವಸೆಯಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ರಾಜೇಶ್ ನಾಯರ್ ನಿರ್ದೇಶಿಸಿರುವ ಈ ಚಿತ್ರ ಅತ್ಯತ್ತಮವಾಗಿ ಮೂಡಿ ಬಂದಿದೆ ಎನ್ನುವುದು ಚಿತ್ರತಂಡದ ಅನಿಸಿಕೆ. ಸಂತೋಷ್ ಕುಮಾರ್ ಪಾತಾಜೆಯವರು ಇಲ್ಲಿ ಕ್ಯಾಮರಾ ಹಿಡಿದಿದ್ದಾರೆ.