ಇಂಡಿಯನ್ ಪ್ರೀಮಿಯರ್ ಲೀಗ್ ಭಾರೀ ಹಣವನ್ನು ಬಾಚಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಚಿತ್ರರಂಗ ತನಗೂ ಒಂದು ಲೀಗ್ ಬೇಕೆಂದು ಹುಟ್ಟು ಹಾಕಿರುವ ಟ್ವೆಂಟಿ-20 ಲೀಗ್ ಇದು. ಹೆಸರು 'ಸೆಲೆಬ್ರಿಟಿ ಕ್ರಿಕೆಟ್ ಲೀಗ್'. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗಳನ್ನೊಳಗೊಂಡ ಐದು ತಂಡಗಳು ಈ ಸಿಸಿಎಲ್‌ನಲ್ಲಿರುತ್ತವೆ.
ಹಾಗಾಗಿ ಇನ್ನು ಮುಂದೆ ಸಿನಿಮಾದಲ್ಲಿ ಮಾತ್ರ ಚಿತ್ರನಟರು ರಂಜಿಸುವುದಲ್ಲ, ಕ್ರಿಕೆಟ್ ಪಂದ್ಯಗಳಲ್ಲೂ ಮನರಂಜನೆ ನೀಡಲಿದ್ದಾರೆ. ಆ ಮೂಲಕ ಹಣ ಮಾಡುವ ತಂತ್ರವೂ ಅಡಗಿದೆ. ಐಪಿಎಲ್‌ನಲ್ಲಿರುವಂತೆ ಇಲ್ಲೂ ತಂಡಗಳ ಬಿಡ್ಡಿಂಗ್ ನಡೆಯುತ್ತದೆ. ಆಟಗಾರರ (ನಟ) ಹರಾಜಿನ ಬದಲು ಆಯ್ಕೆ ಮಾಡಲಾಗುತ್ತದೆ.
ಇದನ್ನು ಬಹಿರಂಗಪಡಿಸಿದ್ದು ಹಿರಿಯ ನಟ ಅಂಬರೀಷ್. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಅವರು, ಕನ್ನಡ ಚಿತ್ರರಂಗದ ತಂಡಕ್ಕೆ ಸುದೀಪ್ ನಾಯಕ ಎಂದು ಪ್ರಕಟಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉಪ ನಾಯಕ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಟಾರ್ ಐಕಾನ್ ಪ್ಲೇಯರ್. ಉಳಿದಂತೆ ತಂಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಒಟ್ಟು 15 ಮಂದಿ ನಾಯಕ ನಟರಿರುತ್ತಾರೆ. ಶೀಘ್ರದಲ್ಲೇ ಅಂತಿಮ ಪಟ್ಟಿಯನ್ನು ಪ್ರಕಟಿಸುವುದಾಗಿ 'ಕಲಿಯುಗದ ಕರ್ಣ' ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್ ಸಿಸಿಎಲ್ ತಂಡಕ್ಕೆ 'ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ' ಕೂಡ ಸಾಥ್ ನೀಡುತ್ತಿದೆ. ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಸಹಕಾರ ನೀಡಲು ಒಪ್ಪಿದ್ದಾರೆ. ವೆಂಕಟೇಶ್ ಪ್ರಸಾದ್ ಕೋಚ್ ಆಗುವ ಸಾಧ್ಯಗಳಿವೆ. ಸಿಸಿಎಲ್ ಅನ್ನು ಕನಿಷ್ಠ 10 ವರ್ಷಗಳಾದರೂ ನಡೆಸುವ ಯೋಚನೆ ಇದೆ ಎಂದಿದ್ದಾರೆ.
ತಂಡದ ಕನಿಷ್ಠ ಮೌಲ್ಯ 17 ಕೋಟಿ...
ಸ್ಯಾಂಡಲ್‌ವುಡ್ ಟೀಮನ್ನು ಯಾರು ಬೇಕಾದರೂ ಖರೀದಿಸಬಹುದಾಗಿದೆ. ಅದಕ್ಕಾಗಿ ಬಿಡ್ ಕರೆಯಲಾಗಿದೆ. ಡಿಸೆಂಬರ್ 10ರಿಂದ 15ರವರೆಗೆ ಬಿಡ್ಡಿಂಗ್‌ಗೆ ಅವಕಾಶವಿರುತ್ತದೆ. ಕನಿಷ್ಠ ಬಿಡ್ಡಿಂಗ್ ಮೌಲ್ಯ 17 ಕೋಟಿ ರೂಪಾಯಿಗಳು.
ಎಲ್ಲಾ ಐದು ತಂಡಗಳ ಹರಾಜು ಮುಗಿದ ಬಳಿಕ ಟೂರ್ನಮೆಂಟ್ ಆರಂಭವಾಗುತ್ತದೆ. ಜನವರಿ 22ರ ಉದ್ಘಾಟನಾ ಪಂದ್ಯ ಮತ್ತು 23ರ ಎರಡನೇ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿವೆ. ಜನವರಿ 29 ಮತ್ತು 30ರಂದು ಹೈದರಾಬಾದಿನಲ್ಲಿ ಫೈನಲ್ ಪಂದ್ಯ ನಡೆಯುತ್ತದೆ. ಚೆನ್ನೈಯಲ್ಲೂ ಕೆಲವು ಪಂದ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ ಜನವರಿ 22ರಂದು ನಡೆಯುವ ಮೊದಲ ಪಂದ್ಯದಲ್ಲಿ ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್ ತಂಡಗಳು ಮುಖಾಮುಖಿಯಾಗಲಿವೆ.
ಖಂಡಿತಾ ಗೆಲ್ಲುತ್ತೀವಿ: ಸುದೀಪ್
ಎಲ್ಲರೂ ತಪ್ಪದೆ ಅಭ್ಯಾಸದಲ್ಲಿ ಭಾಗವಹಿಸಿದರೆ ನಮ್ಮ ಟೀಂ ಖಂಡಿತವಾಗಿ ಗೆಲ್ಲುತ್ತದೆ. ನನಗೆ ನಾಯಕನ ಜವಾಬ್ದಾರಿಯನ್ನು ವಹಿಸಿದ್ದಾರೆ. ಅದನ್ನು ಶ್ರದ್ದೆಯಿಂದ ಮಾಡುತ್ತೇನೆ ಎಂದರು.
ಇನ್ನೂ ಉಪೇಂದ್ರ, ನನಗೆ 11ನೇ ಬ್ಯಾಟ್ಸ್‌ಮನ್ ಸ್ಥಾನವನ್ನಾದರೂ ಕೊಡಿ ಎಂದು ತಮಾಷೆ ಮಾಡಿದರು. ಸಿಸಿಎಲ್‌ನಿಂದ ಭಾರತೀಯ ಚಿತ್ರರಂಗದ ಕಲಾವಿದರಲ್ಲಿ ಪರಸ್ಪರ ಬಾಂಧವ್ಯ ಬೆಳೆಯುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿಸಿಎಲ್ ನಿರ್ದೇಶಕರಾದ ವಿಷ್ಣುವರ್ಧನ್ ಇಂಧೂರಿ, ಶ್ರೀನಿವಾಸುಲು ಮೂರ್ತಿ ಮತ್ತು ತಿರುಮಲ ರೆಡ್ಡಿ ಹಾಗೂ ಕಲಾವಿದರಾದ ಕಿಚ್ಚ ಸುದೀಪ್, ಉಪೇಂದ್ರ, ಪುನೀತ್, ರಾಘವೇಂದ್ರ ರಾಜ್‌ಕುಮಾರ್, ತಾರಾ, ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್ ಮುಂತಾದವರಿದ್ದರು.
ಬಾಲಿವುಡ್ ತಂಡ...
ಬಾಲಿವುಡ್ ತಂಡ ಈಗಾಗಲೇ ಹರಾಜು ನಡೆದಿದ್ದು ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಪಡೆದುಕೊಂಡಿದ್ದಾರೆ. ಈ ತಂಡದ ನಾಯಕ ಸುನಿಲ್ ಶೆಟ್ಟಿ. ಹಲವು ಖ್ಯಾತನಾಮರು ಈ ತಂಡಗಳಲ್ಲಿದ್ದಾರೆ. ತಂಡಕ್ಕೆ 'ಮುಂಬೈ ಹೀರೋಸ್' ಎಂದು ಹೆಸರಿಡಲಾಗಿದೆ. ಆದರೆ ಎಷ್ಟು ಕೋಟಿ ರೂಪಾಯಿಗಳಿಗೆ ತಂಡವನ್ನು ಖರೀದಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಸುನಿಲ್ ಶೆಟ್ಟಿ, ರಿತೇಶ್ ದೇಶ್‌ಮುಖ್ (ಉಪನಾಯಕ), ಸಲ್ಮಾನ್ ಖಾನ್, ಹರ್ಮನ್ ಬಾವೇಜ, ಅಫ್ತಾಬ್ ಶಿವದಾಸನಿ, ಶ್ರೇಯಸ್ ತಾಲ್ಪಡೆ, ಕುನಾಲ್ ಖೇಮು, ಅರ್ಬಾಜ್ ಖಾನ್, ಆಶಿಶ್ ಚೌಧರಿ, ಸೊಹೈಲ್ ಖಾನ್, ಮಹೇಶ್ ಮಾಂಜ್ರೇಕರ್, ಸೋನು ಸೂದ್, ಮಕರಂದ್ ದೇಶಪಾಂಡೆ, ಶಬ್ಬೀರ್ ಅಹ್ಲುವಾಲಿಯಾ, ವಿಕಾಸ್ ಕಲಂತ್ರಿ, ಇರ್ಫಾನ್ ಖಾನ್, ಅಂಗದ್ ಬೇಡಿ, ಅಂಕುಶ್ ಚೌಧರಿ, ಅಪೂರ್ವಾ ಲಾಖಿಯಾ, ಕಬೀರ್ ಸದಾನಂದ್ ತಂಡದಲ್ಲಿದ್ದಾರೆ.