ಕೊಲ್ಲೂರು ದೇವಿ ಸನ್ನಿಧಿಯಲ್ಲಿ ಪಲ್ಲವಿಯನ್ನು ವರಿಸಿದ ಸೂರಿ
ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಮನದನ್ನೆ ಪಲ್ಲವಿಯನ್ನು 'ದುನಿಯಾ' ಸೂರಿ ವರಿಸಿದ್ದಾರೆ. ಕೆಲವೇ ಆಪ್ತರ ಉಪಸ್ಥಿತಿಯಲ್ಲಿ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಬುಧವಾರ (ಡಿಸೆಂಬರ್ 8) ಬೆಳಿಗ್ಗೆ ನಡೆದ ಸರಳ ಸಮಾರಂಭದಲ್ಲಿ ಸೂರಿ ಗ್ರಹಸ್ಥಾಶ್ರಮಕ್ಕೆ ಪ್ರವೇಶಿಸಿದರು.
PR
ತೀರಾ ಸರಳವಾಗಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಸೂರಿ ಮತ್ತು ಪಲ್ಲವಿ ಹೆತ್ತವರು, ಸಂಬಂಧಿಕರು ಮತ್ತು ಆಪ್ತ ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದರು.
ಎರಡೂ ಕುಟುಂಬಗಳು ನಿನ್ನೆಯೇ ಕೊಲ್ಲೂರಿಗೆ ತೆರಳಿದ್ದವು. ಇಂದು ಮುಂಜಾನೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿತ್ತು. ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಚಿತ್ರರಂಗದ ಕೆಲವು ಆಪ್ತರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
'ದುನಿಯಾ' ಮೂಲಕ ಚಿತ್ರರಂಗಕ್ಕೆ ನಿರ್ದೇಶಕರಾಗಿ ಭಡ್ತಿ ಹೊಂದಿದ ಸೂರಿ, ನಂತರ ಇಂತಿ ನಿನ್ನ ಪ್ರೀತಿಯ, ಜಂಗ್ಲಿ ಮತ್ತು ಜಾಕಿ ಚಿತ್ರಗಳನ್ನು ನಿರ್ದೇಶಿಸಿ ಬಹುತೇಕ ಯಶಸ್ವಿಯಾದವರು. ನಾಲ್ಕು ಚಿತ್ರಗಳಲ್ಲಿ ಅವರು ಸೋಲು ಕಂಡಿದ್ದು ಇಂತಿ ನಿನ್ನ ಪ್ರೀತಿಯಲ್ಲಿ ಮಾತ್ರ. ಅತ್ತ ಪಲ್ಲವಿ ಕೂಡ ಸೂರಿಯದ್ದೇ ಕ್ಯಾಟಗರಿಗೆ ಸೇರಿದವರು. ದಾವಣಗೆರೆಯವರಾಗಿರುವ ಪಲ್ಲವಿ ಕೂಡ ವರ್ಣಚಿತ್ರ ಕಲಾವಿದೆ.
ಇದೇ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಯೋಗರಾಜ್ ಭಟ್, 'ಸೂರಿ ಮತ್ತು ಪಲ್ಲವಿ ಎರಡು ವರ್ಷಗಳ ಹಿಂದೆ ಪರಸ್ಪರ ಭೇಟಿಯಾಗಿದ್ದರು. ನಂತರ ಅವರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಹೆತ್ತವರ ಒಪ್ಪಿಗೆಯೊಂದಿಗೆ ಮದುವೆಯಾಗಲು ನಿರ್ಧರಿಸಿದರು' ಎಂದರು.
ಇದರೊಂದಿಗೆ ಸೂರಿಯದ್ದು ಲವ್ ಮ್ಯಾರೇಜ್ ಎನ್ನುವುದು ಖಚಿತವಾಗಿದೆ. ಆದರೆ ಕೆಲ ದಿನಗಳ ಹಿಂದೆ ಸ್ವತಃ ಸೂರಿ ಇದನ್ನು ನಿರಾಕರಿಸಿದ್ದರು. ಇಬ್ಬರೂ ಪರಸ್ಪರ ಒಪ್ಪಿದ ನಂತರ ಗುರು-ಹಿರಿಯರು ನೋಡಿ ಮಾಡುತ್ತಿರುವ 'ಆರೇಂಜ್ಡ್ ಮ್ಯಾರೇಜ್' ಎಂದಿದ್ದರು.
ಏನೇ ಇರಲಿ, ಸೂರಿ ವೈವಾಹಿಕ ಜೀವನ ಸುಂದರವಾಗಿರಲಿ ಎಂಬ ಹಾರೈಕೆ ಕನ್ನಡ ಚಿತ್ರ ಪ್ರೇಮಿಗಳದ್ದು.