ಪ್ರೇಮ್ ನಿರ್ದೇಶನದ ಶಿವರಾಜ್ ಕುಮಾರ್ 100ನೇ ಚಿತ್ರ 'ಜೋಗಯ್ಯ'ದಲ್ಲಿ ಹ್ಯಾಟ್ರಿಕ್ ಹೀರೋ ಅದ್ಭುತ ಅಭಿನಯ ನೀಡಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಡುತ್ತಿರುವ ಹೊತ್ತಿಗೆ 102ನೇ ಚಿತ್ರಕ್ಕೂ ಸಹಿ ಹಾಕಿ ಅಚ್ಚರಿ ಹುಟ್ಟಿಸಿದ್ದಾರೆ.
ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಹೊಸ ಚಿತ್ರದ ಹೆಸರು ಸಿಂಹ. ನಿರ್ಮಿಸುತ್ತಿರುವುದು ಅದ್ಧೂರಿ ಚಿತ್ರಗಳ ಸರದಾರ ಕೋಟಿ ರಾಮು. ಇಲ್ಲಿ ಹೇಳಲೇಬೇಕಾದ ಮತ್ತೊಂದು ವಿಚಾರವೆಂದರೆ ಈ ಮೂವರ ಜೋಡಿ 11 ವರ್ಷಗಳ ನಂತರ ಜತೆಯಾಗುತ್ತಿರುವುದು.
ಓಂ-ಶಿವರಾಜ್-ರಾಮು ಜೋಡಿಯ ಕೊನೆ ಚಿತ್ರ 'ಎ.ಕೆ.47'. ಅದಕ್ಕೂ ಮೊದಲು 'ಸಿಂಹದ ಮರಿ' ಬಂದಿತ್ತು. ಈಗ ಬರಿ 'ಸಿಂಹ'ದ ಸರದಿ. ಈ ನಡುವೆ 'ಜಿಲ್ಲಾಧಿಕಾರಿ' ಎಂಬ ಚಿತ್ರ ಇದೇ ಜೋಡಿಯಿಂದ ಬರಬೇಕಿತ್ತಾದರೂ, ಅದು ಅರ್ಧದಲ್ಲೇ ನಿಂತು ಹೋಗಿತ್ತು.
ಚಿತ್ರದಲ್ಲಿ ಇಂದಿನ ಟ್ರೆಂಡ್‌ಗೆ ಏನೂ ಬೇಕೋ ಅದೆಲ್ಲವೂ ಇವೆ ಅನ್ನುತ್ತಿದ್ದಾರೆ ತ್ರಿವಳಿಗಳು. ನಾಯಕಿ ಹಾಗೂ ಇತರ ನಟರ ಆಯ್ಕೆ ನಡೆದಿಲ್ಲ. ಅದರ ಶೋಧಕಾರ್ಯವನ್ನು ನಡೆಸಿದ್ದೇವೆ. 2011ರಲ್ಲಿ ಚಿತ್ರ ಆರಂಭ ಗ್ಯಾರಂಟಿ ಎಂದಿದ್ದಾರೆ ರಾಮು.
ಗ್ರಾಮದ ಯುವ ಮುಖಂಡನಾಗಿರುವ ನಾಯಕನಿಗೆ ತಾನು ಏನೆಂಬುದೇ ಗೊತ್ತಿರುವುದಿಲ್ಲ. ಸಮಾಜಕ್ಕೆ ತನ್ನ ಅವಶ್ಯಕತೆ ಎಷ್ಟಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಆತ ಸಿಂಹದಂತೆ ಬೇಟೆ ಆರಂಭಿಸುತ್ತಾನೆ. ಇದು ಚಿತ್ರದ ವನ್ ಲೈನ್ ಸ್ಟೋರಿ ಎಂದು ಓಂ ಪ್ರಕಾಶ್ ರಾವ್ ತಿಳಿಸಿದ್ದಾರೆ.
ಶಿವಣ್ಣ ಸೆಂಚುರಿ ಚಿತ್ರದ ನಂತರ 101ನೇ ಚಿತ್ರವಾಗಿ ರಾಘವ ಲೋಕಿಯವರ ಚಿತ್ರಕ್ಕೆ ಸಹಿ ಹಾಕಿದ್ದರು. ಆ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಭಯೋತ್ಪಾದನೆ ಕುರಿತ ಚಿತ್ರ ಎಂದು ಹೇಳಲಾಗುತ್ತಿದೆ. ಅದರ ಒಂದು ಹಂತದ ಚಿತ್ರೀಕರಣ ಮುಗಿದ ಬಳಿಕ ಸಿಂಹದ ಆರ್ಭಟ ಶುರುವಾಗುತ್ತದೆ ಎಂದಿದ್ದಾರೆ ನಿರ್ದೇಶಕರು.