ಹತ್ತಾರು ಚಿತ್ರಗಳು ಪರಭಾಷೆಯಿಂದ ಕನ್ನಡಕ್ಕೆ ಭಟ್ಟಿ ಇಳಿಯುತ್ತಿರುವ ಹೊತ್ತಿನಲ್ಲಿ ಬಂದಿರುವ ಸಿಹಿ ಸುದ್ದಿಯಿದು. ವಿಮರ್ಶಕರಿಂದ ಹೊಗಳಿಸಿಕೊಂಡರೂ ಪ್ರೇಕ್ಷಕರಿಂದ ಔದಾಸೀನ್ಯಕ್ಕೊಳಪಟ್ಟಿರುವ 'ಬಿಸಿಲೆ' ಹಕ್ಕುಗಳನ್ನು ತಮಿಳು ನಟ, ನಿರ್ಮಾಪಕ ಟಿ. ರಾಜೇಂದ್ರನ್ ಪಡೆದುಕೊಂಡಿರುವುದೇ ಈ ಸಂತಸದ ವಿಚಾರ.
ದಿಗಂತ್, ಜೆನ್ನಿಫರ್ ಕೊತ್ವಾಲ್ ಪ್ರಧಾನ ಭೂಮಿಕೆಯಲ್ಲಿದ್ದ ಸಂದೀಪ್ ಎಸ್. ಗೌಡ ನಿರ್ದೇಶನದ ಈ ಚಿತ್ರವನ್ನು ಇತ್ತೀಚೆಗಷ್ಟೇ ರಾಜೇಂದ್ರನ್ ಬೆಂಗಳೂರಿಗೆ ಬಂದು ನೋಡಿದ್ದಾರೆ. ಚಿತ್ರ ನೋಡಿದ ನಂತರ ರಿಮೇಕ್ ಹಕ್ಕುಗಳನ್ನು ಕೂಡ ಖರೀದಿಸಿದ್ದಾರೆ.
ರಾಜೇಂದ್ರನ್ ಒಬ್ಬ ಮಗ ಸಿಂಬು ತಮಿಳಿನ ಪ್ರಸಿದ್ಧ ನಟ. ಆದರೆ ಬಿಸಿಲೆ ತಮಿಳು ರಿಮೇಕಿನಲ್ಲಿ ಅವರು ನಟಿಸುತ್ತಿಲ್ಲ. ಬದಲಿಗೆ ಇನ್ನೋರ್ವ ಪುತ್ರನನ್ನು ಇದರಲ್ಲಿ ನಾಯಕನನ್ನಾಗಿ ಮಾಡುವ ಯೋಚನೆ ರಾಜೇಂದ್ರನ್ ಅವರದ್ದು. ಹಲವು ಸಮಯದಿಂದ ಅತ್ಯುತ್ತಮ ಚಿತ್ರಕಥೆಗಾಗಿ ಹುಡುಕಾಟ ನಡೆಸುತ್ತಿದ್ದವರಿಗೆ ಬಿಸಿಲೆ ತುಂಬಾ ಇಷ್ಟವಾಗಿದೆಯಂತೆ.
ಇದನ್ನು ಬಹಿರಂಗಪಡಿಸಿರುವುದು ಬಿಸಿಲೆ ನಿರ್ಮಾಪಕ ಚಂದ್ರು ಟಿ. ಗೌಡ. ಚಿತ್ರರಂಗಕ್ಕೆ ಹೊಸಬರಾಗಿರುವ ಚಂದ್ರುವಿಗೆ ತನ್ನ ಮೊದಲ ಚಿತ್ರವೇ ತಮಿಳಿಗೆ ರಿಮೇಕ್ ಆಗುತ್ತಿರುವ ಖುಷಿಯಲ್ಲಿ ಎರಡನೇ ಚಿತ್ರಕ್ಕೆ ಕೈ ಹಾಕಿದ್ದಾರೆ. ಶೀಘ್ರದಲ್ಲೇ ವಿವರಗಳನ್ನು ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.