'ಕೃಷ್ಣನ್ ಲವ್ ಸ್ಟೋರಿ' ಯಶಸ್ಸಿನ ಬಳಿಕ ಸಾಲು ಸಾಲಾಗಿ ಬರುತ್ತಿರುವ ಚಿತ್ರಗಳನ್ನು ಅಜಯ್ ರಾವ್ ಒಪ್ಪಿಕೊಳ್ಳುತ್ತಲೇ ಇದ್ದಾರೆ. ಕಥೆಯ ಬಗ್ಗೆ, ನಿರ್ದೇಶಕರ ಬಗ್ಗೆ ಯೋಚಿಸುತ್ತಾರೋ ಅಥವಾ ಕೇವಲ ಅವಕಾಶಗಳನ್ನು ಬಾಚಿಕೊಳ್ಳುವ ಆತುರದಲ್ಲಿದ್ದಾರೋ ತಿಳಿಯುತ್ತಿಲ್ಲ. ಆದರೆ ಆ ಸಾಲಿಗೆ ಹೊಸ ಸೇರ್ಪಡೆ 'ಅದ್ವೈತ' ಎಂದುಕೊಳ್ಳುವ ಹಾಗಿಲ್ಲ. ಇದರ ಹಿಂದೆ ದೊಡ್ಡ ತ್ಯಾಗದ ಕಥೆಯೇ ಇದೆ.
ಅಜಯ್ ಮೊದಲ ಚಿತ್ರ 'ಎಕ್ಸ್‌ಕ್ಯೂಸ್ ಮಿ' ಎಂಬುದು ಎಲ್ಲರಿಗೂ ಗೊತ್ತಿರುವಂತದ್ದೇ. ಇದನ್ನು ನಿರ್ಮಿಸಿದ್ದು ಎನ್.ಎಂ. ಸುರೇಶ್. ಪ್ರೇಮ್ ಚೊಚ್ಚಲ ನಿರ್ದೇಶನದ ಈ ಚಿತ್ರದ ಮೂಲಕವೇ ಅಜಯ್ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡದ್ದು. ಹೊಸಬರಿಗೆ ಅವಕಾಶ ನೀಡುವ ಸುರೇಶ್ ಉದಾರತೆಯಿಂದ ಅಜಯ್ ಬೆಳಕಿಗೆ ಬಂದಿದ್ದರು.
MOKSHA
ಇದಕ್ಕೆ ಕಾರಣವಾದ ನಿರ್ಮಾಪಕ ಸುರೇಶ್ ಇಂದು ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ನಿರ್ಮಿಸಿದ ಚಿತ್ರಗಳೆಲ್ಲ ಸೋಲುತ್ತಿವೆ. ಕೈ ಬರಿದಾಗಿದೆ. ಇಂತಹ ಹೊತ್ತಿನಲ್ಲಿ ಅಜಯ್ ಋಣ ತೀರಿಸುವ ಮನಸ್ಸು ಮಾಡಿದ್ದಾರೆ. ಉಚಿತವಾಗಿ ನಟಿಸುತ್ತೇನೆ ಎಂದು ಮುಂದೆ ಬಂದಿದ್ದಾರೆ.
ಇತ್ತೀಚೆಗಷ್ಟೇ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಚಿತ್ರದ ಆಹ್ವಾನ ಪತ್ರಿಕೆ ನೀಡಲು ಹೋಗಿದ್ದಾಗ ಸುರೇಶ್ ನಿರಾಸೆಯಿಂದ ಕುಳಿತಿದ್ದುದನ್ನು ನೋಡಿ ವಿಚಾರಿದ್ದೆ. ಕಥೆ ಕೇಳಿದಾಗ ತುಂಬಾ ನೋವಾಯಿತು. ಹಾಗಾಗಿ ಸಂಭಾವನೆಯಿಲ್ಲದೆ ನಟಿಸಲು ಒಪ್ಪಿದ್ದೇನೆ ಎಂದು ಅಜಯ್ ಹೇಳಿಕೊಂಡಿದ್ದಾರೆ.
ಈ 'ಅದ್ವೈತ' ಚಿತ್ರವನ್ನು ನಿರ್ದೇಶಿಸುವ ಹೊಣೆಗಾರಿಕೆಯನ್ನು ನಾಗಾಭರಣ ಬಳಿ ಕೆಲಸ ಮಾಡಿರುವ ಗಿರಿರಾಜ್ ಎಂಬವರಿಗೆ ಸುರೇಶ್ ಒಪ್ಪಿಸಿದ್ದಾರೆ. ಹೊಸಬರಿಗೆ ಅವಕಾಶ ನೀಡುವ ತನ್ನ ನಿಲುವನ್ನು ಇಲ್ಲೂ ಮುಂದುವರಿಸುತ್ತೇನೆ ಎಂಬುದು ಅವರ ಮಾತು.
ಈ ಚಿತ್ರದ ನಿರ್ದೇಶಕ ಗಿರಿರಾಜ್ ಹಿನ್ನೆಲೆ ರೋಚಕವಾಗಿದೆ. ಇತ್ತೀಚೆಗಷ್ಟೇ ಕೇವಲ 35 ಸಾವಿರ ರೂ.ಗಳಲ್ಲಿ 'ನವಿಲಾದವರು' ಚಿತ್ರ ಮಾಡಿ ಗಾಂಧಿನಗರದಲ್ಲಿ ಸುದ್ದಿಯಾಗಿದ್ದ ಅವರು, ಎರಡು ಬೀದಿ ನಾಟಕಗಳು ಸೇರಿದಂತೆ 18 ನಾಟಕಗಳನ್ನು ರಚಿಸಿ ನಿರ್ದೇಶಿಸಿದವರು. ಡಿಸ್ಕವರಿ ಚಾನೆಲ್‌ಗೆ ಹಲವಾರು ಸಾಕ್ಷ್ಯಚಿತ್ರಗಳನ್ನು ಮಾಡಿಕೊಟ್ಟಿದ್ದಾರೆ. ಇವರು ಬರೆದ 'ಕಥೆಗೆ ಸಾವಿಲ್ಲ' ಎಂಬ ಕಾದಂಬರಿಗೆ ಸಾಹಿತ್ಯ ಪ್ರಶಸ್ತಿಯೂ ಬಂದಿದೆ.
ಸಾಕಷ್ಟು ಸಾಧನೆಗಳನ್ನು ಮಾಡಿರುವ ಗಿರಿರಾಜ್ ಪೂರ್ಣ ಪ್ರಮಾಣದಲ್ಲಿ ನಿರ್ದೇಶನಕ್ಕೆ ಇಳಿದಿರುವುದು ಇದೇ ಮೊದಲು. 'ಅದ್ವೈತ'ವನ್ನು ಸವಾಲಾಗಿ ಸ್ವೀಕರಿಸಿರುವ ಅವರು ತನ್ನ ಜಾಣ್ಮೆಯನ್ನು ಇಲ್ಲೂ ಮೆರೆಯಲಿದ್ದಾರೆ ಎನ್ನುವ ವಿಶ್ವಾಸ ನಿರ್ಮಾಪಕರದ್ದು.
ನಾಯಕಿ ಸೇರಿದಂತೆ, ಇತರ ಕಲಾವಿದರ ಆಯ್ಕೆಗಾಗಿ ಹುಡುಕಾಟ ನಡೆದಿದೆ. ಅದರಲ್ಲೂ ಮುಖ್ಯವಾಗಿ ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡುವ ಮನಸ್ಸು ಗಿರಿರಾಜ್ ಅವರದ್ದು. ಇದೊಂದು ಥ್ರಿಲ್ಲರ್ ಚಿತ್ರ. ಒಬ್ಬ ಬರಹಗಾರನ ಸುತ್ತ ಎಣೆದಿರುವ ಕಥೆ ಎಂದಿದ್ದಾರೆ.
ವೀರಸಮರ್ಥ ಸಂಗೀತ ನೀಡಲಿದ್ದಾರೆ. ಜನವರಿಯಲ್ಲಿ ಮುಹೂರ್ತ ನಡೆಯಲಿದ್ದು, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡದ್ದು.