ಸೂರಿ ತುಂಬಾ ಚೆನ್ನಾಗಿದ್ದ ಲೈಫಿನಲಿ- ಇಲ್ಲಿದೆ ಭಟ್ಟರ ಸಾಂಗು
PR
ಮನದನ್ನೆ ಪಲ್ಲವಿಯನ್ನು ಮೊನ್ನೆ ಬುಧವಾರವಷ್ಟೇ (ನವೆಂಬರ್ 8) ಕೊಲ್ಲೂರಿನಲ್ಲಿ ಸೂರಿ ವರಿಸಿರುವುದು ಗೊತ್ತೇ ಇದೆ. ಈ ಸಂದರ್ಭದಲ್ಲಿ ತನ್ನ ಆಪ್ತಮಿತ್ರನಿಗೆ ಯೋಗರಾಜ್ ಭಟ್ ಭಾರೀ ಕೀಟಲೆ ಮಾಡಿದ್ದಾರಂತೆ. ಯಾವ ರೀತಿಯಲ್ಲೆಲ್ಲ ಗೋಳು ಹೊಯ್ದುಕೊಂಡಿದ್ದಾರೋ ಗೊತ್ತಿಲ್ಲ, ಆದ್ರೆ ಒಂದು ಹಾಡಿನ ಮೂಲಕ ಎದ್ದು ಬಿದ್ದು ನಗುವಂತೆ ಮಾಡಿದ್ದಾರೆ.
ಅದು ಸೂರಿ ನಿರ್ದೇಶನದ 'ಜಾಕಿ' ಚಿತ್ರದ ಹಾಡು. 'ಶಿವ ಅಂತ ಹೋಗುತ್ತಿದ್ದೆ ರೋಡಿನಲಿ... ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ' ಎಂಬ ಭಟ್ರೇ ಬರೆದಿರುವ ಹಾಡನ್ನು ರೀಮಿಕ್ಸ್ ಮಾಡಿ, ಹಾಡಿಸಿ ಸೂರಿಗೆ ಗಿಫ್ಟ್ ಕೊಟ್ಟಿದ್ದಾರೆ.
ಜಾಕಿ ಚಿತ್ರದ ಮೂಲ ಹಾಡು ಭಾರೀ ಹಿಟ್ ಆಗಿತ್ತು. ಅದೇ ರಾಗಕ್ಕೆ ಇದೀಗ ರೇಗಿಸುವ ಕೀಟಲೆ ಸಾಹಿತ್ಯವನ್ನು ಭಟ್ರು ಬರೆದಿದ್ದಾರೆ. ಟಿವಿಗಳಲ್ಲಿ ಈಗಾಗಲೇ ಪ್ರಸಾರವೂ ಆಗಿದೆ.
ಸಾಮಾನ್ಯವಾಗಿ ಗಂಭೀರವಾಗಿರುವ, ಮನಸ್ಸು ಬಿಚ್ಚಿ ಮಾತನಾಡಲು ಚೌಕಾಶಿ ಮಾಡುವ ಸೂರಿ ಈ ಹಾಡನ್ನು ಕೇಳಿಯಾದರೂ ಬಾಯ್ತುಂಬ ನಕ್ಕಿರಬಹುದು. ಇರಲಿ ಬಿಡಿ, ಆ ಹಾಡಿನ ಸಾಹಿತ್ಯವನ್ನು (ಪೂರ್ಣ ಸಾಹಿತ್ಯ ಲಭ್ಯವಾಗಿಲ್ಲ) ನೀವೂ ಓದಿ, ಮಜಾ ಮಾಡಿ.
ಚಿತ್ರ: ಜಾಕಿ ಮೂಲ ಹಾಡು: ಶಿವ ಅಂತ ಹೋಗುತ್ತಿದ್ದೆ ರೋಡಿನಲಿ
ಸೂರಿ ತುಂಬಾ ಚೆನ್ನಾಗಿದ್ದ ಲೈಫಿನಲಿ ಆವಾಗಾವಾಗ್ ಸಿಗ್ತಾ ಇದ್ದಾ ಬಾರಿನಲಿ ಇನ್ನು ಮುಂದೆ ಸಿಗೋದಿಲ್ಲಾ ನೈಟಿನಲಿ ಆದಾ ಮದುವೆ ಗ್ಯಾಪಿನಲಿ..