ಇತ್ತೀಚೆಗಷ್ಟೆ ಕನ್ನಡ ಇಬ್ಬರು ದಿಗ್ಗಜರನ್ನು ಸೇರಿಸಿ 'ವೀರ ಪರಂಪರೆ' ನಿರ್ಮಿಸಿ, ಪ್ರದರ್ಶಿಸಿ ತಕ್ಕ ಮಟ್ಟಿಗೆ ಗಲ್ಲಾಪೆಟ್ಟಿಗೆಯನ್ನು ತುಂಬಿಸಿಕೊಂಡ ನಿರ್ಮಾಪಕ, ನಿರ್ದೇಶಕ ಎಸ್. ನಾರಾಯಣ್ ಈಗ ಮತ್ತೊಂದು ಚಿತ್ರಕ್ಕೆ ಕೈಹಾಕಿದ್ದಾರೆ.
ಆದರೆ, ಈ ಬಾರಿ ಅವರು ಯಾವುದೇ ಸ್ಟಾರುಗಳನ್ನು ನೆಚ್ಚಿಕೊಳ್ಳುತ್ತಿಲ್ಲ. ಬದಲಾಗಿ ರಂಗಭೂಮಿ ಕಲಾವಿದರಿಗೆ ಪ್ರಾಧಾನ್ಯತೆ ನೀಡುವ ಯೋಚನೆಯಲ್ಲಿದ್ದಾರೆ. ಹೊಸ ಪ್ರತಿಭೆಗಳ ಹುಡುಕಾಟದಲ್ಲಿ ನಿರತರಾಗಿರುವ ನಾರಾಯಣ್ ಜನವರಿ 1ರ ಹೊಸ ವರ್ಷದಂದು ಭದ್ರಾವತಿಯಲ್ಲಿ ಮುಹೂರ್ತ ಫಿಕ್ಸ್ ಮಾಡಿದ್ದಾರಂತೆ.
ಸಾಮಾನ್ಯವಾಗಿ ನಾರಾಯಣ್ ಚಿತ್ರವೆಂದರೆ ನಿರ್ಮಾಣ, ನಿರ್ದೇಶನ ಹಾಗೂ ಸಂಗೀತ ಸಹ ಅವರದ್ದೇ ಆಗಿರುತ್ತದೆ ಎಂಬುದು ಕನ್ನಡ ಚಿತ್ರಪ್ರೇಮಿಗಳಿಗೆ ತಿಳಿದ ಸಂಗತಿ. ಅದು ಇಲ್ಲೂ ಮುಂದುವರಿದಿದೆ. ಈ ಬಾರಿ ಇಲ್ಲೊಂದು ಟ್ವಿಸ್ಟ್ ಏನೆಂದರೆ ಸ್ಥಳೀಯ ವಾದ್ಯಗಾರರನ್ನೆ ಬಳಸಿಕೊಂಡು ಸಂಗೀತ ಸಂಯೋಜನೆ ಮಾಡುವ ಆಲೋಚನೆಯಲ್ಲಿದ್ದಾರೆ ನಾರಾಯಣ್.
ಸ್ಥಳೀಯ ಕಲಾವಿದರನ್ನು (ವಾದ್ಯಗಾರರು) ಬಳಸಿಕೊಳ್ಳಲು ನಿರ್ಧರಿಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಲಾಗುತ್ತಿದೆ.
ಜಗದೀಶ್ ವಾಲಿಯವರು ಚಿತ್ರಕ್ಕೆ ಛಾಯಾಗ್ರಾಹಕರು. ಉಳಿದಂತೆ ತಂತ್ರಜ್ಞರ ತಂಡವನ್ನೂ ಹೊಸದಾಗಿ ಸೃಷ್ಟಿಸಿಕೊಳ್ಳಲು ನಾರಾಯಣ್ ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಎಲ್ಲವನ್ನೂ ಬಹಿರಂಗಪಡಿಸುತ್ತಾರಂತೆ.