ಇತ್ತೀಚೆಗಷ್ಟೇ ಎಸಿಪಿ ಅಶೋಕ್ ಕುಮಾರ್ ಅವರಿಂದ ಪೊಲೀಸರು ಹೇಗಿರಬೇಕೆಂದು ತರಬೇತಿ ಪಡೆದುಕೊಂಡಿರುವ ಆದಿತ್ಯ ಈಗ ಫಾರಿನ್‌ನಲ್ಲಿ ಫೈಟ್ ಮಾಡುತ್ತಿದ್ದಾರಂತೆ. ಅದು ಅವರ ಬಹು ನಿರೀಕ್ಷೆಯ 'ಮಾಸ್' ಚಿತ್ರಕ್ಕಾಗಿ.
ಆದಿತ್ಯನ ಪಾಲಿಗೆ ಇದೊಂದು ಡಿಫರೆಂಟ್ ಚಿತ್ರ. ಪೊಲೀಸ್ ಅಧಿಕಾರಿಯಿಂದಲೇ ಟಿಪ್ಸ್ ಪಡೆದಿರುವ ಅವರು ತುಂಬಾ ಲವಲವಿಕೆಯಿಂದ ಇದ್ದಾರಂತೆ. ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ರೌಡಿಗಳನ್ನು ಅಟ್ಟಾಡಿಸಿಕೊಂಡು ಹೊಡೆಯುವ ಚಿತ್ರವಿದಂತೆ.
ಮಾಸ್ ಚಿತ್ರಗಳಿಗೆ ಬೇಡಿಕೆ ಹೆಚ್ಚಿರುವುದರಿಂದಲೋ ಏನೋ, ನಾಗಾರ್ಜುನ ಅಭಿನಯದ ತೆಲುಗು 'ಮಾಸ್' ಚಿತ್ರದ ಹೆಸರನ್ನೇ ಈ ಚಿತ್ರಕ್ಕೂ ನಿರ್ದೇಶಕ ಜೆ.ಜಿ. ಕೃಷ್ಣ ಇಟ್ಟಿದ್ದಾರೆ. ಕೃಷ್ಣ ಅವರ ಹಿಂದಿನ 'ಐತಲಕ್ಕಡಿ' ಕಾಮಿಡಿ ಚಿತ್ರ ನೆಲ ಕಚ್ಚಿದ್ದರಿಂದ ಈ ಬಾರಿ ಆಕ್ಷನ್ ಚಿತ್ರಕ್ಕೆ ಕೈಹಾಕಿದ್ದಾರೆ.
'ನಾನು ಯಶಸ್ಸಿಗಾಗಿ ಹುಡುಕಾಡುತ್ತಿದ್ದೇನೆ. ಈ ಬಾರಿ ಆ ಯಶಸ್ಸನ್ನು ಕಂಡೇ ತೀರುತ್ತೇನೆ' ಎನ್ನುವ ಭರವಸೆಯ ಮಾತು ಕೂಡ ನಿರ್ದೇಶಕರಿಂದ ಬಂದಿದೆ.
ಚಾಮುಂಡೇಶ್ವರಿ ಫಿಲಂ ಸಂಸ್ಥೆಯ 9ನೇ ಚಿತ್ರವಿದು. ಚಿತ್ರದ ನಾಯಕಿಯಾಗಿ ಡೈಸಿ ಬೋಪಣ್ಣ ನಟಿಸುತ್ತಿದ್ದಾರೆ. ಗುರುಕಿರಣ್ ಸಂಗೀತ, ರವಿ ಶ್ರೀವತ್ಸ ಸಂಭಾಷಣೆ ಇದೆ.
ಚಿತ್ರದಲ್ಲಿ ಇನ್ನೊಬ್ಬ ಪ್ರಮುಖ ನಾಯಕನಿಗೆ ಅವಕಾಶ ಇದ್ದು, ಅದು ಯಾರೆಂದು ಇನ್ನೂ ನಿರ್ಧಾರವಾಗಿಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ. ಚಿತ್ರದಲ್ಲಿ ನಾಯಕ ಆದಿತ್ಯನ ಹೆಸರು ವಿಕ್ರಮಾದಿತ್ಯ.