ಓಂ ಪ್ರಕಾಶ್ ರಾವ್ ನಿರ್ಮಾಣ ಮಾಡಿ ನಿರ್ದೇಶಿಸುತ್ತಿರುವ 'ಬೆಳಗಾಂ'ಗೆ ಸಖತ್ ಪಬ್ಲಿಸಿಟಿ ಸಿಕ್ಕುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಅವರು ಉದ್ದೇಶ ಪೂರ್ವಕವಾಗಿ 'ಬೆಳಗಾಂ' ಎಂದು ಹೆಸರಿಟ್ಟಿದ್ದಾರೆ, ಅದನ್ನು ಬೆಳಗಾವಿ ಎಂದೇ ಹೆಸರಿಸಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ತಗಾದೆ ತೆಗೆದಿದೆ.
ಇದು ಚಿತ್ರರಂಗದವರು ಹಾಗೂ ರಾಜಕಾರಣಿಗಳು ಕಲಿತಿರುವ ಪಬ್ಲಿಸಿಟಿ ಗಿಮಿಕ್. ಬೆಳಗಾವಿಯ ವಿಷಯದಲ್ಲಿ ಮರಾಠಿಗರ ಸಮಸ್ಯೆ ಇದೆ ಎಂಬುದು ಗೊತ್ತಿದ್ದು ಓಂಪ್ರಕಾಶ್ ಈ ಹೆಸರನ್ನು ಚಿತ್ರಕ್ಕೆ ಇಟ್ಟಿದ್ದಾರೆ. ಇದರಿಂದ ಪುಕ್ಸಟ್ಟೆ ಪ್ರಚಾರವೂ ಸಿಗುತ್ತೆ ಅನ್ನೋದು ಚಿತ್ರತಂಡದ ನಿರೀಕ್ಷೆಯಿದ್ದಂತಿದೆ. ನಾವಂತೂ ಬೆಳಗಾಂ ಚಿತ್ರಕ್ಕೆ ಅವಕಾಶ ಕೊಡೋದಿಲ್ಲ ಎಂದು ನವನಿರ್ಮಾಣ ವೇದಿಕೆ ಹೇಳಿದೆ.
'ಬೆಳಗಾಂ' ಎನ್ನುವುದು ಮರಾಠಿ ಶಬ್ದ. ಕನ್ನಡದಲ್ಲಿ ಬೆಳಗಾವಿ ಎಂದು ಹೆಸರಿಡಿ. ಚಿತ್ರದ ಶೀರ್ಷಿಕೆ ಅಡಿ 'ಬಾರ್ಡರ್-ದೆರ್ ಇಸ್ ಓನ್ಲಿ ಆರ್ಡರ್' ಎಂಬ ಪಂಚ್ ಲೈನ್ ಕೂಡ ಇದಕ್ಕಿದೆ. ಇದೆಲ್ಲ ಗಮನಿಸಿದರೆ ಮರಾಠಿ ಪುಂಡರಿಗೆ ನಮ್ಮ ಜಿಲ್ಲೆಯ ಹೆಸರನ್ನೇ ಮಾರಿದಂತಾಗುತ್ತದೆ. ಆದ್ದರಿಂದ ಕೂಡಲೇ ಓಂಪ್ರಕಾಶ್ ಬೆಳಗಾಂ ಎನ್ನುವುದರ ಬದಲು 'ಬೆಳಗಾವಿ' ಎಂದು ಹೆಸರಿಡಲಿ ಎಂದು ವೇದಿಕೆ ಒತ್ತಾಯಿಸಿದೆ.
ಓಂಪ್ರಕಾಶ್ ತಮ್ಮ ಸಂಸ್ಥೆಯ ಚಿತ್ರದ ಹೆಸರನ್ನು ಕೂಡಲೇ ಬದಲಾಯಿಸಿದರೆ ನಮ್ಮ ನವನಿರ್ಮಾಣ ಸೇನೆ ಸ್ವಾಗತಿಸುತ್ತದೆ. ಇಲ್ಲವಾದರೆ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯಾಗುವುದಕ್ಕೆ ಬಿಡುವುದಿಲ್ಲ ಎಂದು ಕನ್ನಡ ಪುತ್ರರು ಖಾರವಾಗಿದ್ದಾರೆ.
'ಬೆಳಗಾಂ' ಅಥಾರ್ತ್ 'ಬೆಳಗಾವಿ'ಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಖಾರಹಬ್ಬದ ಕಥಾವಸ್ತುವುಳ್ಳ ಚಿತ್ರ. ಆ ಊರಿನವರು ಎಲ್ಲೇ ಇದ್ದರೂ, ಆ ಹಬ್ಬದಲ್ಲಿ ಅವರ ತಾಯಿ ಕೈತುತ್ತು ತಿನ್ನಲೇಬೇಕು ಅಂತಲೇ ಊರಿಗೆ ಬರುತ್ತಾರೆ. ಇದೇ ವಿಷಯವನ್ನು ಆಧರಿಸಿ ಓಂಪ್ರಕಾಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.