ಗಾಂಧಿನಗರವೂ ಒಂದು ರೀತಿ ರಾಜಕೀಯ ರಂಗವೇ ಎಂದರೆ ತಪ್ಪಲ್ಲ. ಏಕೆಂದರೆ, ನಾವು ಕುಟುಂಬ ರಾಜಕಾರಣ ಎಂದು ಯಾವಾಗಲೂ ಛೇಡಿಸುತ್ತಿರುತ್ತೇವೆ. ಆದರೆ ಯಾರೂ ಕೇರ್ ಮಾಡೋಲ್ಲ. ಇಲ್ಲಿ ಚಿತ್ರರಂಗದಲ್ಲೂ ಕುಟುಂಬ ನಟನೆ, ಕಲಾರಂಗ ಪ್ರವೇಶ ಇದ್ದದ್ದೇ. ಇಲ್ಲೂ ಒಂದು ರೀತಿಯಲ್ಲೇ ಯಾರೂ ಕೇರ್ ಮಾಡಲ್ಲ.
ಈಗ ಹೇಳ ಹೊರಟಿರುವುದು ನಿರ್ದೇಶಕರೊಬ್ಬರ ಮಗಳ ಚಿತ್ರರಂಗ ಎಂಟ್ರಿ ಕುರಿತು. ನಿರ್ದೇಶಕ ರಾಜ್ ಕಿಶೋರ್ ಅವರ ಪುತ್ರಿ ದೀಪ್ತಿ ಈಗ ಗಾಂಧಿನಗರಕ್ಕೆ ತಲುಪಿದ್ದಾರೆ. ಮಿರರ್ ಮೂವೀಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಹೊಸ ಚಿತ್ರಕ್ಕೆ ದೀಪ್ತಿ ನಾಯಕಿ. ನಾಯಕ ನಟನಾಗಿ ರಾಕೇಶ್ ಆಯ್ಕೆಯಾಗಿದ್ದಾರೆ.
ಇಲ್ಲೊಂದು ಚಿಕ್ಕ ಬದಲಾವಣೆಯೆಂದರೆ ಹೆಸರಿಡದ ಮಗಳ ಚಿತ್ರವನ್ನು ತಂದೆ ನಿರ್ದೇಶಿಸುತ್ತಿಲ್ಲ ಎನ್ನುವುದು. ಅವರ ಬದಲಿಗೆ ರಂಜನ್ ಎಂಬುವರು ನಿರ್ದೇಶನದ ಹೊಣೆಯನ್ನು ನಿಭಾಯಿಸಲು ಹೊರಟಿದ್ದಾರೆ. ನಿರ್ದೇಶಕರಾಗಬೇಕೆಂದು ಚಿತ್ರರಂಗ ಪ್ರವೇಶಿಸಿದ ಪವನ್ ಕುಮಾರ್ ಈ ಚಿತ್ರದ ಮೂಲಕ ನಿರ್ಮಾಪಕರಾಗಲಿದ್ದಾರೆ.
ಇದೊಂದು ಪ್ರೇಮಕಥೆ. ಇಲ್ಲಿ ಯುವಕರ ಮನದಲ್ಲಿರುವ ತುಡಿತ, ತಳಮಳ, ನೋವು-ನಲಿವು ಎಲ್ಲವನ್ನು ಒಳಗೊಂಡ ಕಥಾಹಂದರವಿದೆ ಎನ್ನುವುದು ನಿರ್ದೇಶಕರ ಮಾತು. ತಾರಾಬಳಗದಲ್ಲಿ ರಂಗಾಯಣ ರಘು, ಉಮಾಶ್ರೀ, ಸುರೇಶ್ ಮಂಗಳೂರು, ಕರಿಬಸವಯ್ಯ ಮುಂತಾದವರಿದ್ದಾರೆ.
'ಜೋಗಯ್ಯ' ಚಿತ್ರಕ್ಕೆ ಸಹಾಯಕರಾಗಿ ದುಡಿಯುತ್ತಿರುವ ಆನಂದ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಛಾಯಾಗ್ರಾಹಕರಾಗಲಿದ್ದಾರೆ. ಎಸ್. ನಾಗು ಸಂಗೀತ, ಆನಂದಪ್ರಿಯ ಸಂಭಾಷಣೆ ಚಿತ್ರಕ್ಕಿದೆ. ಚಿತ್ರ ನಿರ್ಮಾಣ ತಂಡ ಮುಹೂರ್ತಕ್ಕೆ ಸಂಕ್ರಾಂತಿಯನ್ನು ಎದುರು ನೋಡುತ್ತಿದೆ.