ನಿರ್ದೇಶಕ ಯೋಗರಾಜ್ ಭಟ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ 'ಲಗೋರಿ' ಆಡಬೇಕಿತ್ತು. ಅದು ಯಾಕೋ ಎಳೆದಾಟದಲ್ಲೇ ಕಮರಿ ಹೋಯಿತು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಆಗ ಕೊಟ್ಟಿದ್ದ ಕಾರಣ ಬಜೆಟ್ ಕೊರತೆ. ಇನ್ನಿತರ ವಿವಾದಗಳಿಗೂ ಕಾರಣವಾಗಿದ್ದ ವಿಷಯವಿದು. ಆದರೆ ಈಗ ಪುನೀತ್ ಮತ್ತು ಭಟ್ರು 'ಪರಮಾತ್ಮ'ನನ್ನು ನೆಚ್ಚಿಕೊಂಡಿದ್ದಾರೆ.
MOKSHA
ಆದರೂ 'ಲಗೋರಿ' ಬಗ್ಗೆ ಭಟ್ರು ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಎಲ್ಲವೂ ರಾಕ್‌ಲೈನ್ ಕೈಯಲ್ಲಿದೆ ಎಂದು ಹೇಳುತ್ತಿದ್ದಾರೆ. ಈ ನಡುವೆ ವಿತರಕ ಜಯಣ್ಣ ಅವರಿಗೆ 'ಪರಮಾತ್ಮ' ಎಂಬ ಚಿತ್ರವನ್ನು ಮಾಡಲು ಮುಂದಾಗಿದ್ದಾರೆ. ಪುನೀತ್ ಅವರೇ ಇದರಲ್ಲಿ ನಾಯಕ.
ಎಲ್ಲಾ ಅಂದುಕೊಂಡಂತೆ ನಡೆದರೆ 'ಪರಮಾತ್ಮ'ನಿಗೆ ಸಂಕ್ರಾಂತಿ ಬಳಿಕ ಪೂಜೆ ನಡೆಯಲಿದೆ. ಚಿತ್ರಕಥೆಗೆ ಅಂತಿಮ ಟಚ್ ನೀಡುತ್ತಿರುವುದಾಗಿ ಭಟ್ರು ಹೇಳಿಕೊಂಡಿದ್ದಾರೆ.
ಬಿಗ್ ಬಜೆಟ್ ಚಿತ್ರವೆನ್ನುವುದು ಖಚಿತ. ನಾಯಕಿ ಯಾರು? ಇತರ ಪಾತ್ರಧಾರಿಗಳು ಯಾರು? ಸಂಗೀತಕ್ಕೆ ಈ ಬಾರಿ ಭಟ್ರು ಯಾರ ಕಡೆ ನೋಡಲಿದ್ದಾರೆ ಮುಂತಾದ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ.
ಈಗ ಪುನೀತ್ ರಿಮೇಕ್ ಚಿತ್ರ 'ಹುಡುಗ್ರು'ನಲ್ಲಿ ಬಿಜಿಯಾಗಿದ್ದಾರೆ. ಅದು ತಹಬದಿಗೆ ಬಂದ ನಂತರ 'ಪರಮಾತ್ಮ'ನಿಗೆ ನಮೋ ಎನ್ನಲಿದ್ದಾರೆ.
ಅಂತೂ ಭಟ್ರು ದೂದ್‌ಪೇಡಾ ದಿಗಂತ್‌ರನ್ನು ಬಿಟ್ಟು ಇತರ ನಾಯಕ ನಟರತ್ತ ಗಮನ ಹರಿಸಿದ್ದಾರೆ ಎಂದು ಈಗಲಾದರೂ ಭಟ್ಟರ ಅಭಿಮಾನಿಗಳು ನಿಟ್ಟಿಸಿರು ಬಿಡಬಹುದು.