75ರತ್ತ ಸಾಗುತ್ತಿರುವ 'ಜಾಕಿ'ಗೆ ಪ್ಲಾಟಿನಂ ಡಿಸ್ಕ್ ಅದೃಷ್ಟ
ಸ್ಯಾಂಡಲ್‌ವುಡ್ ಗಳಿಕೆಯಲ್ಲಿ ದಾಖಲೆ ನಿರ್ಮಿಸಿರುವ 'ಜಾಕಿ' 75 ದಿನಗಳನ್ನು ಪೂರೈಸಿ ಮುನ್ನೆಡೆಯುತ್ತಿದೆ. ಈ ನಡುವೆ 'ಪ್ಲಾಟಿನಂ ಡಿಸ್ಕ್' ಬಿಡುಗಡೆಯಾಗಿದೆ.
ಪುನೀತ್ ರಾಜ್‌ಕುಮಾರ್ ಅವರಿಗೆ 2010 ಭರ್ಜರಿ ಬೊನಾಂಜಾ. ಗಾಂಧಿನಗರದ ಮಂದಿಯನ್ನು 'ಎಕ್ಕ.. ರಾಜ... ರಾಣಿ... ನನ್ನ ಕೈಯೊಳಗೆ.... ಹಿಡಿ ಮಣ್ಣು ನಿನ್ನ ಬಾಯೊಳಗೆ' ಎನ್ನುತ್ತಾ ಮುನ್ನುಗ್ಗುತ್ತಿದೆ. ಹರಿಕೃಷ್ಣ ಸಂಗೀತದಲ್ಲಿ ಯೋಗರಾಜ್ ಭಟ್ ಬರೆದ 'ಜಾಕಿ' ಚಿತ್ರದ ಹಾಡುಗಳು ಕನ್ನಡದ ಜನತೆಗೆ ಸಖತ್ ಕಿಕ್ ಕೊಟ್ಟಿವೆ. ಆಡಿಯೋ ಹಕ್ಕನ್ನು ಪಡೆದ ಆನಂದ್ ಆಡಿಯೋ ಮಾಲಿಕ ಮೋಹನ್ ಇದರಿಂದ ಫುಲ್ ಖುಷ್ ಆಗಿದ್ದಾರೆ.
ಆಡಿಯೋ ಮಾರುಕಟ್ಟೆ ಬಿದ್ದುಹೋಗಿದೆ ಎನ್ನುತ್ತಿದ್ದ ಮಂದಿಗೆ 'ಜಾಕಿ' ಜಾಕ್ಪಾಟ್ ಉತ್ತರಿಸಿದೆ. ಲಕ್ಷಗಟ್ಟಲೆ ಆಡಿಯೋ ಸಿಡಿ ಹಾಗೂ ಕ್ಯಾಸೆಟ್‌ಗಳು ಸೇಲಾಗಿರುವುದೇ ಇದಕ್ಕೆ ಸಾಕ್ಷಿ. ಇದೇ ಖುಷಿಯಲ್ಲಿ ಆನಂದ್ ಆಡಿಯೋ 'ಜಾಕಿ' ಚಿತ್ರದ 5.1 ಪ್ಲಾಟಿನಂ ಡಿಸ್ಕ್ ಬಿಡುಗಡೆ ಮಾಡಿದೆ. ಒಂದರ್ಥದಲ್ಲಿ ಇದು ಕನ್ನಡ ಚಿತ್ರರಂಗದಲ್ಲಿ ಆಶಾದಾಯಕ ಬೆಳವಣಿಗೆ.
'ಇದು ತುಂಬಾ ಖುಷಿಯ ಕ್ಷಣ. ಇಂಥ ಕಾರ್ಯಕ್ರಮಗಳು ಆಗಾಗ ಆಗುತ್ತಿರಬೇಕು' ಎಂದು ತಮ್ಮ ಖುಷಿ ವ್ಯಕ್ತಪಡಿಸಿದರು ಆನಂದ್ ಆಡಿಯೋ ಮೋಹನ್. ಈ ಹಿಂದೆ ಪುನೀತ್ ಅವರ ಅಭಿನಯದ 'ಮಿಲನ' ಚಿತ್ರದ ಹಾಡುಗಳ ಪ್ಲಾಟಿನಂ ಡಿಸ್ಕ್ ಕೂಡ ಬಂದಿತ್ತು. ಈಗ ಮತ್ತೆ ಅವರ 'ಜಾಕಿ' ಚಿತ್ರತಂಡಕ್ಕೆ ಸಿಕ್ಕ ಪ್ರತಿಫಲ ಇದು. ಪ್ರತಿಯೊಬ್ಬರೂ ಇದರಲ್ಲಿ ಪಾಲುದಾರರು' ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುನೀತ್, ನಿರ್ದೇಶಕರಾದ ಯೋಗರಾಜ್ ಭಟ್, ಸೂರಿ, ಸಂಗೀತ ನಿರ್ದೇಶಕ ಹರಿಕೃಷ್ಣ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಈ ಸಂತಸವನ್ನು ಹಂಚಿಕೊಂಡರು.