ಕ್ರೀಡಾಪಟುಗಳಿಗೂ ಬಣ್ಣದ ಗೀಳು ಅಂಟಿದರೆ ಹೇಗಿರುತ್ತದೆ? ಕ್ರೀಡೆಯಂತೆ ಚುರುಕಾಗಿ ಓಡುತ್ತದೋ ಅಥವಾ ಓಡೋಗುತ್ತದೋ? ಗೊತ್ತಿಲ್ಲ, ಅದನ್ನು ಅರ್ಥ ಮಾಡಿಸಲು ದಕ್ಷಿಣ ಕನ್ನಡದ ಕಾರ್ಕಳದ ಅಂತಾರಾಷ್ಟ್ರೀಯ ಹೈಜಂಪ್ ಪಟು ರೋಹಿತ್ ಕುಮಾರ್ ಕಟೀಲ್ ಜಂಪ್ ಮಾಡಿದ್ದಾರೆ.
ಹೈಜಂಪ್‌ನಲ್ಲಿ ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸಿ ಪ್ರಶಸ್ತಿ ಪುರಸ್ಕಾರ ಪಡೆದ ಇವರು ಈಗ 'ಬಣ್ಣದ ಕೊಡೆ'ಯ ಮೂಲಕ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಬಣ್ಣದ ಕೊಡೆ ಚಿತ್ರವನ್ನು ನಿರ್ದೇಶಿಸುತ್ತಿರುವುದು ಕೃಷ್ಣ ಬೆಳ್ತಂಗಡಿ. ಅದೇ ಜಿಲ್ಲೆಯವರಾದ ರೋಹಿತ್ ಕುಮಾರ್ ಅವರನ್ನು ಕರೆದು ಕೃಷ್ಣ ಪಾತ್ರ ಕೊಟ್ಟರಂತೆ.
ಅಲ್ಲಿಯವರೆಗೆ ಪಾತ್ರ ನೀಡಿ ಎಂದು ಯಾವ ನಿರ್ಮಾಪಕ-ನಿರ್ದೇಶಕರ ಮನೆ ಬಾಗಿಲಿಗೂ ಹೋಗಿಲ್ಲ ಎಂದು ಹೇಳಿಕೊಂಡಿದ್ದಾರೆ ರೋಹಿತ್.
ಈ ಚಿತ್ರಕ್ಕೆ ಬಣ್ಣ ಹಚ್ಚುವ ಮೊದಲು ಕೊಂಚ ತಯಾರಿಯನ್ನೂ ನಡೆಸಿರುವ ಎಲ್ಐಸಿ ಉದ್ಯೋಗಿ ರೋಹಿತ್‌ರದ್ದು ಕಟ್ಟುಮಸ್ತಾದ ದೇಹ, ತಕ್ಕುದಾದ ಮುಖ. ಯಾವುದೇ ಪಾತ್ರ ನೀಡಿದರೂ ಸಮರ್ಪಕವಾಗಿ ನಿಭಾಯಿಸುವ ವಿಶ್ವಾಸ ಅವರಲ್ಲಿದೆ.
ಸಿನಿಮಾಗೆ ಬಂದರೂ ಕ್ರೀಡೆಯ ಬಗ್ಗೆ ಒಲವು ಇದ್ದೇ ಇದೆ ಎಂದಿದ್ದಾರೆ ರೋಹಿತ್. ಕ್ರೀಡೆಯಲ್ಲಿ ಎಷ್ಟು ಶ್ರಮ ಪಡಬೇಕೋ ಅದೇ ರೀತಿ ನಟನೆಗೂ ಪ್ರಾಶಸ್ತ್ಯ ನೀಡುತ್ತೇನೆ ಎನ್ನುವ ದೃಢ ನಿಲುವು ಅವರಲ್ಲಿದೆ. ಒಳ್ಳೆಯ ಕಲಾವಿದನಾಗಬೇಕೆಂಬ ಹಂಬಲವೂ ಇದೆ ಎಂದಿದ್ದಾರೆ.