'ಕಲಾ ಸಾಮ್ರಾಟ್' ಖ್ಯಾತಿಯ ರಿಮೇಕ್ ವೀರ ಎಸ್. ನಾರಾಯಣ್ ಹೊಸಬರನ್ನೇ ಹಾಕಿಕೊಂಡು ಚಿತ್ರ ಮಾಡುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ಓದಿರುತ್ತೀರಿ. ಆ ಚಿತ್ರಕ್ಕೀಗ 'ದುಷ್ಟ' ಎಂಬ ಹೆಸರನ್ನಿಡಲಾಗಿದೆ.
ಸುಮಾರು 22 ಹೊಸಬರೇ ಚಿತ್ರದಲ್ಲಿದ್ದಾರೆ. ಈಗಿನ ಯುವಕ-ಯುವತಿಯರಲ್ಲಿನ ಪ್ರತಿಭೆ ಕಂಡು ದಂಗಾಗಿರುವ ನಾರಾಯಣ್, ಚಿತ್ರದ ನಾಯಕ-ನಾಯಕಿ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಕೆಲವು ಮೂಲಗಳ ಪ್ರಕಾರ ಚಿತ್ರದಲ್ಲಿ ಹೊಸಬರು ತುಂಬಿರುವುದು ಹೌದಾದರೂ, ಮಗ ಪಂಕಜ್ ನಾಯಕರಾಗುತ್ತಾರೆ.
'ದುಷ್ಟ' ಎಂಬ ಶೀರ್ಷಿಕೆಯ ಕೆಳಗೆ 'ಬೇಲಿ ಮತ್ತು ಹೂವು' ಎಂಬ ಟ್ಯಾಗ್ ಲೈನ್ ಕೂಡ ಇದೆ. ನಾರಾಯಣ್ ಹೇಳಿಕೊಂಡಿರುವಂತೆ ಅವರ ನಿರ್ಮಾಣದ 18ನೇ ಹಾಗೂ ನಿರ್ದೇಶನದ 42ನೇ ಚಿತ್ರ. ಇದು ರಿಮೇಕೋ, ಸ್ವಮೇಕೋ ಅಥವಾ ಎತ್ತಾಕಿಕೊಂಡದ್ದೋ ಎಂಬ ಕುರಿತು ಬಾಯ್ಬಿಟ್ಟಿಲ್ಲ.
ಕಳೆದ 19 ವರ್ಷಗಳಿಂದ ನಿರ್ದೇಶಕನಾಗಿರುವ ನಾನು, ಅನೇಕ ಏಳು-ಬೀಳುಗಳನ್ನು ಕಂಡಿದ್ದೇನೆ. ಹಲವು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಈ ಚಿತ್ರಕ್ಕೂ ಮುಕ್ಕಾಲು ಪಾಲು ಹೊಸಬರನ್ನೇ ಪರಿಚಯಿಸುವ ಸಾಧ್ಯತೆ ಇದೆ ಎನ್ನುವ ಮಾತನ್ನು ಆಡಿದ್ದಾರೆ.
ಇಲ್ಲಿ ಮಲೆನಾಡು ಪ್ರತಿಭೆಗಳಿಗೆ ಹೆಚ್ಚು ಅವಕಾಶ ಉಂಟು. ಅವರಿಗೆಲ್ಲಾ ಅಭಿನಯದ ತರಬೇತಿ ನೀಡಿ, ಪಕ್ವಗೊಳಿಸಿ ನನ್ನ ಕಲ್ಪನೆಯಂತೆ ತೆರೆಮೇಲೆ ತರುವ ಕೆಲಸ ಮಾಡುತ್ತಿದ್ದೇನೆ. ಹೊಸಬರಲ್ಲಿ ಹುಮ್ಮಸ್ಸು, ಗುರುತಿಸಿಕೊಳ್ಳಬೇಕೆಂಬ ತುಡಿತ ಇರುತ್ತದೆ. ಹಾಗಾಗಿ ಅಂತಹ ಹಂಬಲವುಳ್ಳ ಕಲಾವಿದರನ್ನು ಹುಡುಕಿ ಕ್ಯಾಮೆರಾ ಮುಂದೆ ನಿಲ್ಲಿಸುತ್ತೇನೆ. ಇದೊಂದು ಯುವಪೀಳಿಗೆ ಸುತ್ತ ಹೆಣೆದಿರುವ ಕಥೆ. ಇದರಲ್ಲಿ ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ.