ರೀಲ್ ಲೈಫ್ ಹೀರೋಗಳು ರಿಯಲ್ ಲೈಫ್ ಹೀರೋಗಳಂತೆ ನಟಿಸಲು ಹೋಗಿ ಏಟು ತಿನ್ನುವುದು ಸಹಜ. ಅಂಥಹವರ ಪಟ್ಟಿಯಲ್ಲಿ 'ತೂಫಾನ್' ಚಿತ್ರದ ನಾಯಕ ನಟ, 'ಶಿಶಿರ' ಖ್ಯಾತಿಯ ಯಶಸ್ ಕೂಡ ಸೇರಿದ್ದಾರೆ. ಇತ್ತೀಚೆಗಷ್ಟೇ ಸುದೀಪ್ ಸಾಹಸ ದೃಶ್ಯದಲ್ಲಿ ಅಭಿನಯಿಸುತ್ತಿದ್ದ ಸಂದರ್ಭದಲ್ಲಿ ಗಾಯಗೊಂಡ ಸುದ್ದಿಯ ಬೆನ್ನಿಗೆ ಯಶಸ್ ಕೂಡ ಗಾಯಗೊಂಡಿದ್ದಾರೆ.
ಸಾಹಸ ಸಂಯೋಜನೆ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಯಶಸ್ ಕಣ್ಣಿನ ಸುತ್ತ ಎಂಟು ಹೊಲಿಗೆ ಹಾಕುವಂತಹ ಗಾಯವಾಗಿದೆ.
ಸುಮೋ ಗ್ಲಾಸ್ ಬ್ರೇಕ್ ಮಾಡುವ ದೃಶ್ಯ. ನಾಯಕ ಯಶಸ್ ಡ್ಯೂಪ್ ಇಲ್ಲದೇ ಆ ದೃಶ್ಯಗಳಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು. ಅದರಂತೆ, ತಯಾರಿ ಕೂಡ ಮಾಡಿಕೊಂಡಿದ್ದರು. 'ಶೂಟ್'ಗೂ ಮುನ್ನ ಮಾನಿಟರಿಗಾಗಿ ಒಂದು ಟೇಕ್... ಈ ಸಂದರ್ಭದಲ್ಲೇ ಮುಖಕ್ಕೆ ಏಟಾಗಿದೆ.
ಟಾಟಾ ಸುಮೋ ಎದುರುಗಡೆಯಿಂದ ಬರುತ್ತಿದ್ದಂತೆಯೇ, ನಾಯಕ ನೆಗೆದು ಗ್ಲಾಸ್ ಒಡೆಯಬೇಕಿತ್ತು. ಸಾಹಸ ಸಂಯೋಜಕರ ಸೂಚನೆ ಮೇರೆಗೆ ಆಚೆ ಈಚೆ ಆದರಂತೆ ಯಶಸ್, ಇದೇ ವೇಳೆ, ಸುಮೋ 2-3 ಸ್ಟೆಪ್ ಮುಂದಕ್ಕೆ ಚಲಿಸಿದೆ. ಹೀಗಾಗಿ, ನಾಯಕನ ಕಾಲು ಆಯತಪ್ಪಿ ಗ್ಲಾಸಿನ ಮೇಲೆ ಬಿದ್ದಿದೆ. ಆಗ ಗ್ಲಾಸ್ ಚೂರುಗಳು ಮುಖಕ್ಕೆ ಚಿಮ್ಮಿ ಗಾಯಗಳಾಗಿವೆ. ಎಲ್ಲವೂ ಮುಗಿದು ಈಗ ಹೊಲಿಗೆಗಳನ್ನು ಬಿಚ್ಚಿಸಿಕೊಂಡು ಶೂಟಿಂಗ್ ರೆಡಿಯಾಗಿ ಬಂದಿದ್ದಾರಂತೆ.
ಚೆನ್ನೈನ ನಕ್ಷತ್ರ ನಾಯಕಿಯಾಗಿರುವ 'ತೂಫಾನ್' ನಿರ್ದೇಶಿಸುತ್ತಿರುವುದು ಸ್ಟೈಲ್ ಶೀನು. ಚಿತ್ರದಲ್ಲಿ ರಮೇಶ್ ಭಟ್, ಸಾಧು ಕೋಕಿಲ, ಪ್ರಮಿಳಾ ಜೋಷಾಯ್, ಸುಧಾ ಬೆಳವಾಡಿ ಮತ್ತಿತರರು ಇದ್ದಾರೆ.