ಕನ್ನಡ ಚಿತ್ರಪ್ರೇಕ್ಷಕರ ಮನ ಗೆಲ್ಲುವುದು ಸುಲಭವಲ್ಲ: ರಿಚರ್ಡ್
ಯುವ ಪೀಳಿಗೆಯನ್ನು ಮನದಲ್ಲಿ ಇಟ್ಟುಕೊಂಡು ಮಾಡಿರುವ ಕನ್ನಡದ ಮೊದಲ ಪ್ರಯತ್ನ 'ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ' ಎಂದು ಚಿತ್ರದ ನಿರ್ದೇಶಕ ಡಾ. ರಿಚರ್ಡ್ ಕ್ಯಾಸ್ಟಲಿನೋ ಚಿತ್ರದ ಕ್ಯಾಸೆಟ್, ಸಿಡಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಹೇಳಿದ್ದಾರೆ.
ಧ್ವನಿಸುರುಳಿ ಬಿಡುಗಡೆ ಸಮಾರಂಭದ ವೇದಿಕೆಗೆ ಗಣ್ಯರನ್ನು ಆತ್ಮೀಯವಾಗಿ ಹೂಗುಚ್ಛ ನೀಡಿ ಬರಮಾಡಿಕೊಳ್ಳುತ್ತಿದ್ದರು. ನಂತರ ಮಾತನಾಡಿದ ರಿಚರ್ಡ್ 'ಕನ್ನಡದಲ್ಲಿ ಈಗ ಗೆಲ್ಲುವುದು ಸುಲಭವಲ್ಲ, ಕನ್ನಡ ಪ್ರೇಕ್ಷಕರ ನಾಡಿಮಿಡಿತ ಅರಿಯುವುದೇ ಕಷ್ಟ. ಆದರೂ ಕನ್ನಡಿಗರ ಅಭಿರುಚಿಗೆ ತಕ್ಕಂತ ಪ್ರಯತ್ನ ಮಾಡಿದ್ದೇನೆ ಎಂಬ ನಂಬಿಕೆ ಇದೆ' ಎಂದಿದ್ದಾರೆ.
ಇದೊಂದು ಸಾಂಸಾರಿಕ ಕಥೆ. ಪ್ರೀತಿ-ಪ್ರೇಮ ಎಲ್ಲವೂ ಇದೆ. ಚಿತ್ರದ ಚಿತ್ರೀಕರಣವನ್ನು ಬ್ಯಾಂಕಾಕ್, ಮಲೇಷಿಯಾ, ಸಿಂಗಪೂರ್, ಸಿಮ್ಲಾ ಸೇರಿದಂತೆ ಮಡಿಕೇರಿ, ಮಂಗಳೂರು ಹಾಗೂ ಸೇಂಟ್ ಮೇರಿಸ್ ದ್ವೀಪಗಳಲ್ಲಿ ನಡೆಸಿದ್ದೇವೆ. ಚಿತ್ರದ ಸಂಭಾಷಣೆ ಹಾಗೂ ಹಾಡುಗಳು ಹೈಲೈಟ್. ನಿರ್ಮಾಪಕ ಫ್ರಾಂಕ್ ಫೆರ್ನಾಂಡಿಸ್‌ಗೂ ಇದು ಮೊದಲ ಕನ್ನಡ ಚಿತ್ರ.
ಇಲ್ಲಿ ಹೊಸ ತರಹದ ಪಾತ್ರ ಇದೆ. 'ಅಂಬಾರಿ' ಚಿತ್ರದಲ್ಲಿ ಮುಗ್ದ, 'ಪೆರೋಲ್'ನಲ್ಲಿ ರಫ್ ಅಂಡ್ ಟಫ್ ಹುಡುಗಿ ಆಗಿದ್ದೆ. ಇಲ್ಲಿ ಆ ಎರಡೂ ಅವತಾರಗಳೂ ಸೇರಿವೆ ಎಂದಿದ್ದಾರೆ ಚಿತ್ರದ ನಾಯಕಿ ಸುಪ್ರೀತಾ.
ನಾಯಕ ರೋಹಿತ್ ಹೆಚ್ಚು ಮಾತನಾಡಲಿಲ್ಲ. ನಟಿ ತಾರಾ ಅವರು ಧ್ವನಿಸುರುಳಿ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಕೋರಿದರು. ಆನಂದ್ ಆಡಿಯೋ ಮೋಹನ್, ಸಂಗೀತ ನಿರ್ದೇಶಕ ವಿಜಯಭಾರತಿ, ಕವಿರಾಜ್, ಗಾಯಕಿ ರಾಧಿಕಾ ಹಾಡುಗಳ ಹಾಗು ನಿರ್ದೇಶಕ ಕ್ಯಾಸ್ಟಲಿನೋ ಅವರ ಗುಣಗಾನ ಮಾಡಿದರು.