ಎಸ್. ನಾರಾಯಣ್ ತನ್ನ ಹೊಸ ಸಿನಿಮಾದಲ್ಲಿ ಮತ್ತೆ ತನ್ನ ಮಗನನ್ನು ಹೀರೋ ಮಾಡಿ ನಿರ್ದೇಶಿಸಲಿದ್ದಾರೆ ಎನ್ನುವುದು ನಿಜವಾಗಿದೆ. ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಸುಳಿವು ಸಿಕ್ಕಿದ್ದರೂ ಖಚಿತವಾಗಿರಲಿಲ್ಲ. ಸಾಲು ಸಾಲು ಫ್ಲಾಪ್ ಚಿತ್ರಗಳನ್ನು ನೀಡಿರುವ ಮಗನನ್ನು ಹೇಗಾದರೂ ಮಾಡಿ ಕ್ಲಿಕ್ಕಿಸಬೇಕು ಎಂದು ಈ ಬಾರಿ 'ಕಲಾ ಸಾಮ್ರಾಟ್' ಪಣ ತೊಟ್ಟಂತಿದೆ.
ಹಲವು ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಚಿತ್ರಕ್ಕೆ ಹುಟ್ಟೂರಿನಲ್ಲೇ ಮುಹೂರ್ತ ನೆರವೇರಿಸಿದ್ದಾರೆ. 42ನೇ ಚಿತ್ರವಾಗಿರುವ ಇದರ ಹೆಸರು 'ದುಷ್ಟ' ಎಂಬುದು ಗೊತ್ತೇ ಇದೆ. ಭದ್ರಾವತಿಯಲ್ಲಿನ ಭಾಗ್ಯವತಿ ಚಿತ್ರಮಂದಿರದ ಮಾಲೀಕರೂ ಆಗಿರುವ ನಾರಾಯಣ್, ಅಲ್ಲೇ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.
ಚಿತ್ರಕ್ಕೆ ಆರಿಸಿಕೊಂಡಿರುವುದು ತನ್ನ ಗತಕಾಲದ ಜೀವನವನ್ನು. ಅಂದಿನ ದಿನಗಳಲ್ಲಿ ಭದ್ರಾವತಿಯಲ್ಲಿ ಗಾರೆ ಕೆಲಸ, ಸೊಪ್ಪು ಮಾರುವ ಕೆಲಸ, ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ದಿನಗಳನ್ನು ಸಿನಿಮಾದಲ್ಲಿ ಅಳವಡಿಸಲಿದ್ದಾರೆ.
ಗಾರೆ ಕೆಲಸ ಮಾಡುತ್ತಿದ್ದ ಸ್ನೇಹಿತನ ನೊಂದ ಜೀವನದ ಬದುಕೇ ಈ ಚಿತ್ರದ ಕಥಾವಸ್ತು. ಸ್ನೇಹಿತ ನೋವು ಅನುಭವಿಸುತ್ತಲೇ ಪ್ರಾಣ ಬಿಟ್ಟ. ಅಂದಿನ ಜೀವನವನ್ನೇ ತೋರಿಸಲು ಹೊರಟಿದ್ದೇನೆ. ಪ್ರೀತಿ ಹಾಗೂ ರೋಷ ತುಂಬಿದ ಕುಟುಂಬದ ಚಿತ್ರವಿದು ಎಂದು ಆ ದಿನಗಳನ್ನು ಮೆಲುಕು ಹಾಕುತ್ತಾ ಗದ್ಗದಿತರಾದರು ನಾರಾಯಣ್.
ನಾರಾಯಣ್ ಪುತ್ರನದ್ದು ಸ್ನೇಹಿತನ ಪಾತ್ರವಂತೆ. ಹೊಸಬರೇ ಚಿತ್ರದಲ್ಲಿ ತುಂಬಿದ್ದಾರೆ ಎಂದು ಹೇಳುತ್ತಿದ್ದ ನಿರ್ದೇಶಕರ ಹೂರಣ ತನ್ನ ಮಗನನ್ನೇ ಮತ್ತೆ ಹೀರೋ ಮಾಡುವ ಮೂಲಕ ಬಹಿರಂಗವಾಗಿದೆ.
ಪಂಕಜ್ ಹಾಡಿನ ದೃಶ್ಯವನ್ನು ಹಾಗೂ ನಾಯಕಿ ಸುರಭಿ ಜಡೆ ಎಳೆಯುವ ಶಾಟ್ ಅನ್ನು ಛಾಯಾಗ್ರಾಹಕ ಜಗದೀಶ್ ವಾಲಿ ಚಿತ್ರೀಕರಿಸಿಕೊಂಡರು. ಚಿತ್ರಕ್ಕೆ ಎಸ್. ನಾರಾಯಣ್ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಾಹಿತ್ಯ, ನಿರ್ದೇಶನವಿದೆ. ನಿರ್ಮಾಣದ ಹೊಣೆಗಾರಿಕೆಯೂ ಅವರದ್ದೇ. ನೋಡುಗರು ಮಾತ್ರ ಕನ್ನಡಿಗರು ಎಂದು ಅವರು ಹೇಳಿಕೊಂಡಿಲ್ಲ!