ರಾಘವ ಲೋಕಿ 'ಲಕ್ಷ್ಮಿ'ಯಲ್ಲಿ ಶಿವಣ್ಣನಿಗೆ ಮತ್ತೆ ಹೊಸ ಔಟ್‌ಲುಕ್
PR
ರಾಘವ ಲೋಕಿ ನಿರ್ದೇಶನದ 'ಲಕ್ಷ್ಮಿ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೊಮ್ಮೆ ವಿಭಿನ್ನ ಪಾತ್ರದಲ್ಲಿ ಮಿಂಚಲಿದ್ದಾರೆಯೇ? ನಿರ್ದೇಶಕರ ಮಾತುಗಳನ್ನು ಕೇಳಿದರೆ ಇಂತಹ ಅನುಭವವಾಗುತ್ತದೆ. ಇದು ಶಿವಣ್ಣನ 101ನೇ ಚಿತ್ರ.
ಲೋಕಿ ಈ ಹಿಂದೆ 'ಸತ್ಯ ಇನ್ ಲವ್' ಮೂಲಕ ಶಿವಣ್ಣನಿಗೆ ವಿಭಿನ್ನ ಗೆಟಪ್ ಕೊಟ್ಟವರು. ಚಿತ್ರ ಫ್ಲಾಪ್ ಆದರೂ ಹಲವರ ಗಮನ ಸೆಳೆದಿತ್ತು. ಮತ್ತೆ ಇವರು ಜೋಡಿಯಾಗಿರುವುದರಿಂದ ಸಹಜವಾಗಿಯೇ ಕುತೂಹಲ ಹೆಚ್ಚಿದೆ.
ಕಂದು ಬಣ್ಣದ ಗುಂಗುರು ಕೂದಲು, ಬೆಳ್ಳಿ ಬಣ್ಣದ ಮುಖವಾಡ, ಕೆಂಡದ ಉಂಡೆಗಳಂಥ ಕಣ್ಣುಗಳ ಗೆಟಪ್ ಇವುಗಳಲ್ಲಿ ಕೆಲವು. ನಿರ್ದೇಶಕರ ಪ್ರಕಾರ ಶಿವಣ್ಣನ ನೂರು ಚಿತ್ರಗಳನ್ನು ಮೆಲುಕು ಹಾಕುವ ಕಾರ್ಯ ಈ ಚಿತ್ರದ ಮೂಲಕ ನಡೆಯಲಿದೆ.
ಆದರೆ ಚಿತ್ರದ ಹೆಸರಿಗೂ ಗೆಟ್ಟಪ್ಪುಗಳಿಗೂ ಯಾವ ಸಂಬಂಧವೂ ಕಾಣುತ್ತಿಲ್ಲವಲ್ಲ? ಏನಿದು ಎಂಬ ಪ್ರಶ್ನೆಗೆ ತಲೆಯಾಡಿಸುವ ಮೂಲಕ ಲೋಕಿ ಬುದ್ಧಿವಂತ ನಿರ್ದೇಶಕನಂತೆ ಪೋಸ್ ಕೊಟ್ಟರು.
ಕೊನೆಗೂ ಕೊಂಚ ಬಾಯ್ಬಿಟ್ಟ ಅವರು, ಇದೊಂದು ಕೌಟುಂಬಿಕ ಚಿತ್ರ. ಈ ಚಿತ್ರದಲ್ಲಿ ಬೇರೆ ರೀತಿಯ ಶಿವಣ್ಣನನ್ನು ನೋಡಲಿದ್ದೀರಿ. ಹೊಸ ಶೈಲಿ ಸಂಭಾಷಣೆ ಮತ್ತು ಮೇಕಿಂಗ್ ಸ್ಟೈಲ್ ಇರುತ್ತದೆ. ಇಲ್ಲಿ ನಾಯಕನ ಹೆಸರು ಲಕ್ಷ್ಮೀನಾರಾಯಣ. ಆದ್ದರಿಂದ ಈ ಚಿತ್ರಕ್ಕೆ ಲಕ್ಷ್ಮಿ ಎಂದು ಹೆಸರು ಇಟ್ಟಿದ್ದೇವೆ ಎಂದರು.
ಚಿತ್ರದ ನಾಯಕಿ ಪ್ರಿಯಾಮಣಿ. ಮೊದಲ ಬಾರಿಗೆ ಶಿವಣ್ಣ ಸಂಗಡ ನಟಿಸುತ್ತಿದ್ದಾರೆ. ಈ ಚಿತ್ರದ ನಿರ್ಮಾಣದ ಹೊಣೆ ಡಾ. ರಾಜಕುಮಾರ್ ಕುಟುಂಬದ್ದು. ಸಂಭಾಷಣೆ ಎಂ.ಎಸ್. ರಮೇಶ್ ಅವರದು.